ಉದಯವಾಹಿನಿ, ಬೆಂಗಳೂರು: ಯುಪಿಎಸ್ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ಸಾಧಕರು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದಾಗಿ ನಾಗರಿಕ ಸೇವೆಗೆ ಸೇರಿದಕ್ಕೆ ನಿಮ್ಮ ಜೀವನ ಸಾರ್ಥಕವೆನಿಸಲಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಶನಿವಾರ ಮಹಾಲಕ್ಷ್ಮೀಲೇಔಟ್‌ನ ಬಿಜಿಎಸ್‌ಸಿಇಟಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸನ್ಮಾನ ಸಮಾರಂಭ’ದಲ್ಲಿ ಶ್ರೀಗಳು ಆಶೀರ್ವವನ ನೀಡಿದರು.ಸಮಾಜದಲ್ಲಿ ಒಳ್ಳೆಯ ಸೇವೆ ಮಾಡಲು ಸಾಧಕರಿಗೆ ದೊಡ್ಡ ಅವಕಾಶ ಸಿಕ್ಕಿದಂತಾಗಿದೆ. ಹುದ್ದೆಯಲ್ಲಿ ಕುಳಿತ ಬಳಿಕ ಯಾವುದೇ ವ್ಯಾಮೋಹಕ್ಕೆ ಒಳಗಾಗದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಬೇಕು. ಸೇವೆಯು ನಿಮ್ಮ ಬದುಕಿಗೆ ದಿವ್ಯತನ ತರುವಂತಾಗಲಿ. ಹಣಕ್ಕೆ ಆಸೆಪಡೆದೆ ನಾಗರಿಕ ಸೇವೆಯಲ್ಲಿ ತೊಡಗುವಂತಾಗಬೇಕು. ದೇಶದ ಯಾವ ರಾಜ್ಯಕ್ಕೆ ತೆರಳಿದರೂ ನಮ್ಮ ಸಂಸ್ಕೃತಿಯನ್ನು ಮರೆಯದೆ ಭಾರತೀಯ ಮಕ್ಕಳಾಗಿ ಸೇವೆ ಮಾಡಲು ಮುಂದಾಗಬೇಕು. ಪ್ರತಿ ವರ್ಷ ಅಂದಾಜು 20 ಲಕ್ಷ ಜನ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಇದರಲ್ಲಿ ಒಂದು ಸಾವಿರದೊಳಗೆ ರ್‍ಯಾಂಕ್ ಪಡೆಯುವುದು ಜೀವಮಾನದಲ್ಲಿ ದೊಡ್ಡ ಸಾಧನೆ ಮಾಡಿದಂತೆ ಎಂದು ಹೇಳಿದ್ದಾರೆ.
