ಉದಯವಾಹಿನಿ, ಬೆಂಗಳೂರು: ಕಾನೂನಿನ ಮುಂದೆ ಎಲ್ಲರೂ ಸಮಾನರು. ಆಪಾದನೆ ಬಂದಾಗ ತನಿಖೆಗೆ ಸಹಕಾರ ನೀಡಬೇಕಾಗುತ್ತದೆ ಎಂದು ಹೇಳಿರುವ ಮಾಜಿ ಸಚಿವ, ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮುಖ್ಯಮಂತ್ರಿ ಪತ್ನಿ ಮತ್ತು ಸಚಿವ ಬೈರತಿ ಸುರೇಶ್ ಅವರಿಗೆ ಇ.ಡಿ. ನೋಟಿಸ್ ನೀಡಿರುವುದನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆಗೆ ಎಲ್ಲರೂ ಒಳಗಾಗಲೇಬೇಕಾಗುತ್ತದೆ. ಇ.ಡಿ. ನೋಟಿಸ್‌ನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ಇದೆ ಎಂದು ಹೇಳಿದರು.
ಆರೋಪಗಳು ಬಂದಾಗ ಸತ್ಯಾಸತ್ಯತೆಯನ್ನು ತಿಳಿಯಲು ತನಿಖೆ ಎದುರಿಸಲೇಬೇಕು ಎಂದು ಅವರು ಹೇಳಿದರು.
ಮಾಜಿ ಸಚಿವ ಶ್ರೀರಾಮುಲು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಬಗ್ಗೆ ಅವರೇ ಸ್ಪಷ್ಟಪಡಿಸಿದ್ದಾರೆ. ನಾನು ಶ್ರೀರಾಮುಲು ಅವರ ಹೇಳಿಕೆಯನ್ನು ಅನುಮಾನಿಸುವುದಿಲ್ಲ ಎಂದರು.
ಎಲ್ಲರೂ ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ. ಕಟೆಗೆದೊ ಪಟೆಂಗೆ ಅನ್ನುವುದು ಬಿಜೆಪಿಗೂ ಅನ್ವಯವಾಗಲಿದೆ. ಏಕ್ ಹೇ ದೊ ಸೇಫ್ ಹೈ ಅನ್ನುವುದನ್ನು ನಮ್ಮ ರಾಷ್ಟ್ರೀಯ ನಾಯಕರೇ ಹೇಳಿದ್ದಾರೆ ಎಂದರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯತ್ನಾಳ್ ಸ್ಪರ್ಧೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಲ್ಲಿ ಶಾಶ್ವತವಾಗಿ ಯಾರಿಗೂ ಅಧಿಕಾರ ಇರಲ್ಲ. ಶಾಶ್ವತ ರಾಜ್ಯಾಧ್ಯಕ್ಷ, ಶಾಶ್ವತ ಪ್ರಧಾನ ಕಾರ್ಯದರ್ಶಿ ಹುದ್ದೆ ಇಲ್ಲ ಎಂದರು. ಪಕ್ಷವನ್ನು ಯಾರು ಮುನ್ನಡೆಸಬೇಕು ಎನ್ನುವುದನ್ನು ಪಕ್ಷದ ಸಂಸದೀಯ ಸಮಿತಿ ತೀರ್ಮಾನಿಸುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಬೇಕಾಗುತ್ತದೆ. ಹೈಕಮಾಂಡ್ ಯಾರಿಗೆ ಜವಾಬ್ದಾರಿ ಕೊಡುತ್ತದೋ ಅವರ ಜತೆ ನಾವು ಕೆಲಸ ಮಾಡುತ್ತೇವೆ ಎಂದರು.
