ಉದಯವಾಹಿನಿ, ಬೆಂಗಳೂರು: ೪೦ ಅಡಿಗಿಂತ ಕಡಿಮೆ ಅಗಲವಿರುವ ರಸ್ತೆಗಳನ್ನು ಹೊಂದಿರುವ ವಸತಿ ಪ್ರದೇಶಗಳಲ್ಲಿರುವ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳ ಲೈಸೆನ್ಸ್ ಮುಂದುವರೆಸುವುದಿಲ್ಲ ಎಂದು ಬಿಬಿಎಂಪಿ ಸುತ್ತೋಲೆಯೊಂದನ್ನು ಹೊರಡಿಸಿದೆ.
ಕಳೆದ ಹತ್ತು ವರ್ಷಗಳಿಂದ ಅಂದರೆ ೨೦೧೫ ರ ನಂತರ ತೆರೆದ ಅಂಗಡಿಗಳು ವ್ಯಾಪಾರ ಪರವಾನಗಿಗಳನ್ನು ಇನ್ನು ಮುಂದೆ ನವೀಕರಿಸಲಾಗುವುದಿಲ್ಲ. ಪ್ರಮುಖವಾಗಿ ಅವರು ೪೦ ಅಡಿಗಿಂತ ಕಡಿಮೆ ಅಗಲವಿರುವ ರಸ್ತೆಗಳನ್ನು ಹೊಂದಿರುವ ವಸತಿ ಪ್ರದೇಶಗಳಲ್ಲಿರುವ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳ ಲೈಸೆನ್ಸ್ ಮುಂದುವರೆಸುವುದಿಲ್ಲ ಎಂದಿದೆ.
ಫೆ.೨೮ರ ಒಳಗಡೆ ೨೦೨೫-೨೬ನೇ ಹಣಕಾಸು ವರ್ಷದ ವ್ಯಾಪಾರ ಪರವಾನಗಿಗಳ ನವೀಕರಣ ಮಾಡಬೇಕೆಂದು ಬಿಬಿಎಂಪಿ ಸೂಚಿಸಿದ್ದು, ಉದ್ದಿಮೆದಾರರ ಅನುಕೂಲಕ್ಕೆ ತಕ್ಕಂತೆ ೧ ರಿಂದ ೫ ಆರ್ಥಿಕ ವರ್ಷಗಳ ಅವಧಿಗೆ ನವೀಕರಣ ಮಾಡಬಹುದಾಗಿದೆ.
ನವೀಕರಣ ಶುಲ್ಕವನ್ನು ಉದ್ದಿಮೆದಾರರು ಕೋರುವ ಆರ್ಥಿಕ ವರ್ಷಕ್ಕೆ ಮಿತಿಗೊಳಿಸಿ ಪಾವತಿಸಿಕೊಳ್ಳುವಂತೆ ಸೂಚಿಸಲಾಗಿದೆ.ಕಳೆದ ಸಾಲಿನಂತೆ ಉದ್ದಿಮೆ ಪರವಾನಿಗೆ ಶುಲ್ಕವನ್ನು ಆನ್‌ಲೈನ್ ಮುಖಾಂತರ ಮಾಡಬೇಕು. ಫೆ.೧ ರಿಂದ ಫೆ. ೨೮ರ ವರೆಗೆ ದಂಡವಿಲ್ಲದೇ ಪರವಾನಿಗೆ ಶುಲ್ಕವನ್ನು ಪಾವತಿಸಬಹುದಾಗಿದೆ.
