ಉದಯವಾಹಿನಿ, ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎರಡೂ ಜವಳಿ ಪಾರ್ಕ್ ತಲೆ ಎತ್ತುವ ಕಾಲ ಹತ್ತಿರವಾಗಿದೆ. ಕಡೂರು ಮತ್ತು ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಜಾಗ ಗುರುತಿಸಿದ್ದು, ಸರ್ಕಾರದಿಂದ ಅನುಮೋದನೆ ಕೂಡ ದೊರೆತಿದೆ. ಚಿಕ್ಕಮಗಳೂರು ತಾಲ್ಲೂಕಿನ ಲಕ್ಕಾ ಹೋಬಳಿಯ ಹಿರೇಗೌಜ ಮತ್ತು ಕಡೂರು ತಾಲ್ಲೂಕಿನ ಚೀಲನಹಳ್ಳಿ ಗ್ರಾಮದ ಬಳಿ ಜವಳಿ ಪಾರ್ಕ್ ಸ್ಥಾಪನೆಯಾಗಲಿವೆ.
ಎರಡೂ ಕಡೆ ಜಾಗ ಗುರುತಿಸಿ ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿತ್ತು.
ಮಾರ್ಗಸೂಚಿಗಳ ಪ್ರಕಾರ ಪಿಪಿಪಿ (ಖಾಸಗಿ ಸಹಭಾಗಿತ್ವದಲ್ಲಿ) ಮಾದರಿಯಲ್ಲಿ ಎರಡೂ ಕಡೆ ಏಕಕಾಲಕ್ಕೆ ಜವಳಿ ಪಾರ್ಕ್ ಸ್ಥಾಪಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ(ಜವಳಿ) ಅನುಮೋದನೆ ನೀಡಿದೆ. ಈ
ಯೋಜನೆಯ ಮುಂದಿನ ಪ್ರಕ್ರಿಯೆ ಆರಂಭಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಅಭಿವೃದ್ಧಿ ಆಯುಕ್ತರಿಗೆ ಕೈಗಾರಿಕೆ ಇಲಾಖೆ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನ ಹಿರೇಗೌಜ ಸರ್ವೆ ನಂಬರ್‌ನಲ್ಲಿ 15 ಎಕರೆ, ಕಡೂರು ತಾಲ್ಲೂಕಿನ ಚೀಲನಹಳ್ಳಿ ಬಳಿ 25 ಎಕರೆಯ ಸರ್ಕಾರಿ ಜಾಗವನ್ನು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಜಿಲ್ಲಾಧಿಕಾರಿ ವರ್ಗಾಯಿಸಿದ್ದರು. ಬಳಿಕ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.
