ಉದಯವಾಹಿನಿ, ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ ತೊಡೆ ತಟ್ಟಿರುವ ಭಿನ್ನಮತೀಯ ನಾಯಕರು ಅಧ್ಯಕ್ಷ ಸ್ಥಾನಕ್ಕೆ ಇನ್ನೆರಡು ದಿನದಲ್ಲಿ ಅಭ್ಯರ್ಥಿಯನ್ನು ಪ್ರಕಟಿಸುವುದಾಗಿ ಘೋಷಿಸಿದ್ದಾರೆ.
ಸದಾಶಿವನಗರದಲ್ಲಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಸಭೆ ನಡೆಸಿದ ಮಾಜಿ ಸಚಿವರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಶಾಸಕರಾದ ಬಿ.ಪಿ.ಹರೀಶ್, ಹೊಳಲ್ಕೆರೆ ಚಂದ್ರಪ್ಪ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಮತ್ತಿತರರು ಸಭೆ ಸೇರಿದ್ದರು.
ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ ಬಿಜೆಪಿಯ ಭಿನ್ನಮತೀಯರು ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತಮ ಬಣದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಒಮತದ ತೀರ್ಮಾನವನ್ನು ಕೈಗೊಂಡರು.
ವಿಜಯೇಂದ್ರ ವಿರುದ್ದ ತಮ ಬಣದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲೇಬೇಕು. ಅಭ್ಯರ್ಥಿಯಾರಗಲಿದ್ದಾರೆ ಎಂಬುದನ್ನು ದೆಹಲಿಯಲ್ಲಿ ಮತ್ತೊಂದು ಸಭೆ ಸೇರಿ ಪ್ರಕಟಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ವಿರೋಧಿ ಬಣದ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್, ನಮ ಬಣದಿಂದ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಕಣಕ್ಕಿಳಿಸುವುದು ಖಚಿತ. ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದು ಮುಖ್ಯವಲ್ಲ. ನಮಗೆ ಎಷ್ಟು ಮತ ಬರುತ್ತವೆ ಎಂಬುದು ಕೂಡ ನಗಣ್ಯ. ಆದರೆ ಚುನಾವಣೆ ನಡೆಯುವುದು ಖಚಿತ ಎಂದು ವಿಶ್ವಾಸದಿಂದ ಹೇಳಿದರು.
ಪಕ್ಷದಲ್ಲಿ ಕೆಲವರು ಏಕಪಕ್ಷೀಯ ಧೋರಣೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜಿಲ್ಲಾಧ್ಯಕ್ಷರ ನೇಮಕಾತಿ, ಪದಾಧಿಕಾರಿಗಳ ನೇಮಕಾತಿ ಸೇರಿದಂತೆ ಹಲವಾರು ವಿಷಯಗಳಲ್ಲಿ ವಿಜಯೇಂದ್ರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇದು ಮೊದಲು ಹೋಗಬೇಕು ಎಂದು ಕೆಂಡ ಕಾರಿದರು.
