ಉದಯವಾಹಿನಿ, ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳವನ್ನು ನಿರ್ಬಂಧಿಸುವ ಸುಗ್ರೀವಾಜ್ಞೆಗೆ ಇಂದು ಸಂಜೆಯೊಳಗಾಗಿ ಸ್ಪಷ್ಟ ರೂಪ ಸಿಗಲಿದ್ದು, 2-3 ದಿನಗಳಲ್ಲಿ ಅಂತಿಮ ಆದೇಶ ಹೊರಡುವ ಸಾಧ್ಯತೆಯಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಗ್ರೀವಾಜ್ಞೆಯ ಕರಡು ಮಸೂದೆ ತಯಾರಿಸುವಾಗ ಆರ್ಬಿಐನ ನಿಯಮಾವಳಿಗಳನ್ನು ಪರಿಶೀಲಿಸಬೇಕಿತ್ತು. ಈಗಾಗಲೇ ಸಹಕಾರ ಇಲಾಖೆ ಹಾಗೂ ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಕಾನೂನುಗಳಿವೆ. ಎಲ್ಲವನ್ನೂ ಸುಗ್ರೀವಾಜ್ಞೆಯೊಂದಿಗೆ ಸಮೀಕರಿಸಲು ಮುಖ್ಯಮಂತ್ರಿಯವರು ಪರಿಶೀಲಿಸುವಂತೆ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ ಎಂದರು.
ಎಲ್ಲಾ ಸಾಧಕ ಬಾಧಕಗಳನ್ನು ಪರಿಶೀಲಿಸಿ ಇಂದು ಸಂಜೆಯೊಳಗಾಗಿ ಸ್ಪಷ್ಟ ರೂಪ ನೀಡಲಾಗುವುದು. ಸರ್ಕಾರಕ್ಕೂ ಹೆಚ್ಚಿನ ಆತಂಕವಿದ್ದು, ಮಸೂದೆ ಶೀಘ್ರವಾಗಿ ಜಾರಿಯಾಗಬೇಕು ಎಂಬ ಒತ್ತಾಸೆಯಿದೆ. ಮೈಕ್ರೋಫೈನಾನ್ಸ್ ಕಂಪನಿಗಳವರು ಜನರಿಗೆ ನೀಡುವ ಕಿರುಕುಳ ದಿಂದಾಗಿ ಕೆಲವರು ಆತಹತ್ಯೆ ಮಾಡಿಕೊಂಡಿದ್ದಾರೆ, ಇನ್ನೂ ಕೆಲವರು ಮನೆ ಬಿಟ್ಟು ಹೋಗಿದ್ದಾರೆ. ಅನಧಿಕೃತವಾದ ಮೈಕ್ರೋ ಫೈನಾನ್ಸ್ ಕಂಪನಿಗಳು ಏನು ಮಾಡಿದರೂ ಕೇಳುವವರಿಲ್ಲ ಎಂಬಂತಹ ವಾತಾವರಣ ಇದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು. ತಮದೇ ಕ್ಷೇತ್ರದಲ್ಲಿ 2.5 ಲಕ್ಷ ರೂ.ಗಳನ್ನು ಒಬ್ಬರು ಸಾಲ ಪಡೆದಿದ್ದಾರೆ. 4.5 ಲಕ್ಷ ರೂ. ವಾಪಸ್ ಕಟ್ಟಿದ್ದಾರೆ. ಆದರೆ ಇನ್ನೂ 80 ಸಾವಿರ ರೂ. ಕಟ್ಟಬೇಕೆಂದು ಒತ್ತಡ ಹೇರಿ ಮನೆಗೆ ಬೀಗ ಹಾಕಲಾಗಿದೆ. ಇದರಿಂದಾಗಿ ಕುಟುಂಬದ ಸದಸ್ಯರು ಮನೆಬಿಟ್ಟು ಹೋಗಿದ್ದಾರೆ. ಇದು ತಮ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಮೈಕ್ರೋ ಫೈನಾನ್ಸ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿ ತಪ್ಪಿತಸ್ಥರನ್ನು ಬಂಧಿಸಲಾಗಿದೆ. ಕುಟುಂಬದವರಿಗೆ ಮನೆ ವಾಪಸ್ ಕೊಡಿಸಲಾಗಿದೆ ಎಂದರು.
