ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಕೊಟ್ಟಿದ್ದಾರೆ.ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ’ ಅಂಗವಾಗಿ ಕಾರ್ಮಿಕ ಇಲಾಖೆ ವತಿಯಿಂದ ಎಂ.ಜಿ. ರಸ್ತೆಯ ಗಾಂಧಿ ಪ್ರತಿಮೆಯಿಂದ ಕೆ.ಆರ್.ವೃತ್ತದವರೆಗೆ ಆಯೋಜಿಸಲಾಗಿದ್ದ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿರುವುದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಶಿಕ್ಷಣಕ್ಕೆ ಅಡ್ಡಿಯಾಗುವ ಬಾಲಕಾರ್ಮಿಕ ಅನಿಷ್ಠ ಪದ್ಧತಿ ನಿಲ್ಲಬೇಕಿದೆ. ಗ್ಯಾರೇಜ್, ಪೆಟ್ರೋಲ್ ಬಂಕ್, ಅಂಗಡಿ ಮುಂಗಟ್ಟು ಹಾಗೂ ಹೊಟೆಲ್‌ಗಳ ಮಾಲೀಕರು ಸಣ್ಣ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳಬಾರದು. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಶತಮಾನಗಳಿಂದ ಮಹಿಳೆಯರು ಸೇರಿ ಶೂದ್ರರನ್ನು ಶಿಕ್ಷಣದಿಂದ ದೂರ ಇಡಲಾಗಿತ್ತು. ಹೀಗಾಗಿ, ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಹೆಚ್ಚಾಗಿವೆ. ಶಿಕ್ಷಣದಿಂದ ಜ್ಞಾನ, ಸ್ವಾಭಿಮಾನ ಹೆಚ್ಚಾಗಲಿದೆ ಎಂದರು.ಪಾಲಕರು ಮಾತ್ರವಲ್ಲದೆ ಉದ್ಯಮ ನಡೆಸುವವರೂ ಈ ಬಗ್ಗೆ ಜಾಗೃತರಾಗಬೇಕು. ಸಂವಿಧಾನದಲ್ಲಿ ಶಿಕ್ಷಣ ಮೂಲಭೂತ ಹಕ್ಕು ಎಂದು ಹೇಳುತ್ತದೆ. ಮಕ್ಕಳು ಕಲಿಯುವ ವಯಸ್ಸಿನಲ್ಲಿ ದುಡಿಮೆ ಮಾಡಿದರೆ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ. ಇದು ಬದಲಾಗಬೇಕಿದೆ. ರಾಜ್ಯದ 7 ಕೋಟಿ ಜನ ಸೇರಿ ದೇಶದ 142 ಕೋಟಿ ಜನರು ಶಿಕ್ಷಣ ಪಡೆಯಬೇಕು. ಎಲ್ಲರೂ ಉದ್ಯೋಗ ಪಡೆದು ಮನುಷ್ಯರಾಗಿ ಬದುಕುವ ವಾತಾವರಣ ಇರಬೇಕು. ಭಾರತ ಅಭಿವೃದ್ಧಿಶೀಲ ರಾಷ್ಟ್ರದಿಂದ ಅಭಿವೃದ್ಧಿ ರಾಷ್ಟ್ರ ಎನ್ನಿಸಿಕೊಳ್ಳಬೇಕಾದರೆ ಸಾಕ್ಷರತೆ ಅಗತ್ಯ ಎಂದು ಸಿಎಂ ಪ್ರತಿಪಾದಿಸಿದರು.
