ಉದಯವಾಹಿನಿ, ಚಿತ್ರದುರ್ಗ: ನಗರದ ಗಾಂಧಿ ವೃತ್ತದ ಕೂಗಳತೆಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ನಿಲ್ದಾಣದಲ್ಲಿನ ಸ್ವಚ್ಛತೆ, ಮೂಲಸೌಲಭ್ಯ ಕೊರತೆ ಸೇರಿದಂತೆ ಅವ್ಯವಸ್ಥೆ ತಾಂಡವವಾಡುತ್ತಿದೆ. ಬಸ್ ನಿಲ್ದಾಣಕ್ಕೆ ಉಪಲೋಕಾಯುಕ್ತ ಕೆ.ಎನ್.
ಫಣೀಂದ್ರ ಭೇಟಿ ನೀಡಿ, ‘ನಿಮ್ಮ ಮನೆಯನ್ನು ಹೀಗೆ ಕೊಳಕಾಗಿ ಇಟ್ಟುಕೊಂಡಿದ್ದೀರಾ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿ ಇಂದಿಗೆ 19 ದಿನ ತುಂಬಿದೆ. ಆದರೂ ‘ನೋಡಿ ಸ್ವಾಮಿ..ನಾವಿರೋದು ಹೀಗೆ..’ ಎಂಬ ಸ್ಥಿತಿ ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಕಾಣುತ್ತಿದೆ. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಕೆ.ಎನ್. ಫಣೀಂದ್ರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಆದರೆ ನಿಲ್ದಾಣದ ಸುತ್ತಲೂ ‘ಬೀಚಿಂಗ್ ಪೌಡರ್’ ಕಾಣುತ್ತಿದೆ ಹೊರತು ಬದಲಾವಣೆ ಮಾತ್ರ ಆಗಿಲ್ಲ. ಅಶ್ವಮೇಧ, ಐರಾವತ, ಅಂಬಾರಿ ಉತ್ಸವ ಇ.ವಿ. ಪವರ್ ಪ್ರಸ್.. ಹೀಗೆ ನಿತ್ಯ ಸಾವಿರಕ್ಕೂ ಹೆಚ್ಚು ಸಂಖ್ಯೆಯ ಬಸ್‌ಗಳು ಚಿತ್ರದುರ್ಗಕ್ಕೆ ಬಂದು ಹೋಗುತ್ತವೆ. ವರ್ಷದ 365 ದಿನವೂ ಹಗಲಿರುಳು ಬಸ್‌ಗಳು ನಿಲ್ದಾಣಕ್ಕೆ ಬರುವ ಕಾರಣ ಪ್ರಯಾಣಿಕರ ದಟ್ಟಣೆ ಸಾಮಾನ್ಯ.
ಚಿತ್ರದುರ್ಗ ವಿಭಾಗೀಯ ವ್ಯಾಪ್ತಿಯಲ್ಲಿ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ ಹಾಗೂ ಪಾವಗಡ ಘಟಕಗಳಿವೆ. ಒಟ್ಟು 320 ಬಸ್‌ಗಳಿವೆ.
ಬಸ್‌ಗಳು ಒಳ ಬಂದು ಹೊರ ಹೋಗುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಇದರ ನಡುವೆ ನಿಲ್ದಾಣದೊಳಗೆ ಆಟೊ, ಬೈಕ್‌ಗಳು ಎಲ್ಲದೆ ಸಂಚಾರ ನಡೆಸುವುದರಿಂದ ಸಮಸ್ಯೆ ಮತ್ತು ಉಲ್ಬಣಿಸಿದೆ. ಬೆಂಗಳೂರು, ತುಮಕೂರು, ವಿಜಯನಗರ, ಹುಬ್ಬಳ್ಳಿ, ಬೆಳಗಾವಿ, ಹಾವೇರಿ, ದಾವಣಗೆರೆ, ಬಳ್ಳಾರಿ, ಕೊಪ್ಪಳ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ವಿವಿಧ ಭಾಗಗಳಿಗೆ ಬಸ್ ಸೌಲಭ್ಯ ಇರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ನಿಲ್ದಾಣದಲ್ಲಿ ಬೆರಳೆಣಿಕೆ ಪ್ಲಾಟ್ ಫಾರ್ಮ್‌ಗಳು ಇರುವುದರಿಂದ ಬಸ್ ಚಾಲಕರು, ನಿರ್ವಾಹಕರು ಎಲ್ಲಿ ಬಸ್ ನಿಲುಗಡೆ ಮಾಡಬೇಕು ಎಂದು ಯೋಚಿಸಿದರೆ, ಪ್ರಯಾಣಿಕರು ಬಸ್‌ಗಳು ಎಲ್ಲಿ ನಿಲ್ಲುತ್ತವೆ ಎಂದು ತಡಕಾಡುವ ಸ್ಥಿತಿ ಇದೆ
