ಉದಯವಾಹಿನಿ, ಬೆಂಗಳೂರು: ರಾಜ್ಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ಅವರ ಸರ್ವಾಧಿಕಾರಿ ಧೋರಣೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ಖೋ-ಖೋ ಸಂಸ್ಥೆ ವತಿಯಿಂದ ಇಂದು ಫ್ರಿಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ವಿಶ್ವಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದಂತಹ ಮಕ್ಕಳಿಗೆ ಪಕ್ಷದ ರಾಜ್ಯಗಳಲ್ಲಿ ನೀಡುತ್ತಿರುವಂತೆ ’ಎ’ ಗ್ರೇಡ್ ಮತ್ತು ’ಬಿ’ ಗ್ರೇಡ್ ಹುದ್ದೆಯನ್ನು ನೀಡುವುದು ಮತ್ತು ಕನಿಷ್ಠ ೮೦ ಲಕ್ಷ ರೂಪಾಯಿಗಳನ್ನಾದರು ಬಹುಮಾನದ ಹಣವಾಗಿ ಪ್ರತಿಯೊಬ್ಬ ಕ್ರೀಡಾಪಟುಗಳಿಗೆ ಕೊಡುವಂತಹ ನಿಯಮ ರೂಪಿಸಬೇಕು, ಅಧಿಕೃತ ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ಈ ಹಿಂದೆ ನೀಡುತ್ತಿದ್ದಂತೆ ನೇರವಾಗಿ ಮನವಿಯನ್ನು ಪಡೆದು ಅನುದಾನವನ್ನು ನೀಡುವ ಪದ್ಧತಿಯನ್ನು ಜಾರಿಗೊಳಿಸಬೇಕು. ಈಗ ಇರುವ ರಾಜ್ಯ ಒಲಂಪಿಕ್ ಸಂಸ್ಥೆಯ ಮೂಲಕ ಅನುದಾನ ಕೇಳುವ ಪದ್ಧತಿಯನ್ನು ರದ್ದುಗೊಳಿಸಬೇಕು, ಎಲ್ಲಾ ಅಧಿಕೃತ (ರಾಷ್ಟ್ರೀಯ ಫೆಡರೇಷನ್‌ಗೆ ನೋಂದಣಿಯಾದ) ರಾಜ್ಯ ಕ್ರೀಡಾ ಸಂಸ್ಥೆಗಳನ್ನು ಕಡ್ಡಾಯವಾಗಿ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸದಸ್ಯರಾಗಿ ನೇಮಿಸುವಂತೆ ಕ್ರಮ ಕೈಗೊಳ್ಳಬೇಕು.
ಕರ್ನಾಟಕ ರಾಜ್ಯ ಒಲಂಪಿಕ್ ಅಸೋಸಿಯೇಷನ್ ಮೂಲಕ ಯಾವುದೇ ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ತೊಂದರೆ ಕೊಡದಂತೆ ಕ್ರಮ ಕೈಗೊಳ್ಳಬೇಕು, ರಾಷ್ಟ್ರೀಯ ಒಲಂಪಿಕ್ ಸಂಸ್ಥೆಯಲ್ಲಿರುವ ಕಾನೂನುಗಳನ್ನು ರಾಜ್ಯ ಒಲಂಪಿಕ್ ಸಂಸ್ಥೆಯು ಬದಲಿಸಿದ್ದರೆ ಅದನ್ನು ಸರಿಪಡಿಸಬೇಕು ಮತ್ತು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಒಲಂಪಿಕ್ ಸಂಸ್ಥೆಯ ಅನುಮತಿ ಇಲ್ಲದೇ ಯಾವುದೇ ಬದಲಾವಣೆಗಳನ್ನು ಮಾಡದಂತೆ ಕ್ರಮ ಕೈಗೊಳ್ಳಬೇಕು.
