ಉದಯವಾಹಿನಿ, ಬೆಂಗಳೂರು: ಕರ್ನಾಟಕದ ಅತ್ಯಂತ ಕಿರಿಯ ಸಂಸದ ಎಂಬ ಹೆಗ್ಗಳಿಕೆ ಪಾತ್ರವಾಗಿ ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಗೆದ್ದಿರುವ ಸಂಸದ ತೇಜಸ್ವಿ ಸೂರ್ಯ ಅವರ ಮದುವೆಗೆ ಮುಹೂರ್ತ ನಿಗದಿಯಾಗಿದೆ.
ತೇಜಸ್ವೀ ಸೂರ್ಯ ವರಸಲಿರುವ ಶಿವಶ್ರೀ ಸ್ಕಂದ ಪ್ರಸಾದ್ ಅವರು ಮೂಲತಃ ಚೆನ್ನೈಯವರು. ಅವರು ಶಾಸ್ತ್ರೀಯ ಸಂಗೀತ ಗಾಯಕಿ ಮತ್ತು ಭರತನಾಟ್ಯ ಕಲಾವಿದೆ. ಅವರು ಶಾಸ್ತ್ರ ವಿಶ್ವವಿದ್ಯಾಲಯದಿಂದ ಬಯೋ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಇದರೊಂದಿಗೆ ಅವರು ಚೆನ್ನೈ ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿಯನ್ನೂ ಮತ್ತು ಚೆನ್ನೈ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂಎ ಪದವಿ ಪಡೆದಿದ್ದಾರೆ.
ಮಾ.5 ಮತ್ತು 6ರಂದು ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್‌ನಲ್ಲಿ ನಡೆಯಲಿರುವ ವಿವಾಹದಲ್ಲಿ ತೇಜಸ್ವಿ ಸೂರ್ಯ ಅವರು ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ವರಿಸಲಿದ್ದಾರೆ. ಮಾ.5ರ ಬುಧವಾರ ಸಂಜೆ ವರಪೂಜೆ ಕಾರ್ಯಕ್ರಮ ನಡೆಯಲಿದೆ.
ಮಾ.6ರ ಗುರುವಾರ ಬೆಳಗ್ಗೆ ಕಾಶಿಯಾತ್ರೆ, ಜೀರಿಗೆ ಬೆಲ್ಲ, ಮುಹೂರ್ತ ಹಾಗೂ ಲಾಜಾ ಹೋಮ ನಡೆಸಲಾಗುತ್ತದೆ. ಬಳಿಕ ಅದೇ ದಿನ ಬೆಳಗ್ಗೆ 9.30 ರಿಂದ 10.15ರ ನಡುವಿನ ತುಲಾ ಲಗ್ನದಲ್ಲಿ ವಧು ಶಿವಶ್ರೀ ಸ್ಕಂದಪ್ರಸಾದ್‌ರನ್ನ ತೇಜಸ್ವಿ ಸೂರ್ಯ ವರಿಸಲಿದ್ದಾರೆ. ಇದಾದ ಮೇಲೆ ಅಂದೇ ತೇಜಸ್ವಿ ಸೂರ್ಯರ ಗಿರಿನಗರ ನಿವಾಸದಲ್ಲಿ, ವಧುವನ್ನು ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮ ಇರಲಿದೆ.
ಮದುವೆ ನಡೆದು ಎರಡು ದಿನಗಳ ಬಳಿಕ ಅಂದರೆ ಮಾ.9 ರಂದು ಭಾನುವಾರ ಅರತಕ್ಷತೆ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ. ಬೆಳಗ್ಗೆ 10.30ರಿಂದ 1.30 ರವರೆಗೆ ರಿಸೆಪನ್ ನಡೆಯಲಿದೆ.

 

Leave a Reply

Your email address will not be published. Required fields are marked *

error: Content is protected !!