ಉದಯವಾಹಿನಿ, ಗದಗ: ರೈತರಿಗೆ ಭೂಮಿ ಮಂಜೂರಾತಿಗೆ ಸಲ್ಲಿಸಿದ ಅರ್ಜಿಗಳನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡಿ ಪರಿಹಾರ ನೀಡಬೇಕು. ರೈತರ ವಿವಿಧ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕೆಂದು ಒತ್ತಾಯಿಸಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಮುಖಂಡರು ಜಿಲ್ಲಾಡಳಿತ ಭವನ ಮುಂದೆ ಪ್ರತಿಭಟನೆ ನಡೆಸಿದರು.
ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ, ‘ಜಿಲ್ಲೆಯ ರೈತರು ಶ್ರಮಜೀವಿಗಳು, ಜಿಲ್ಲೆಯಲ್ಲಿ ಮಳೆಯು ಪ್ರತಿ ವರ್ಷ ಕಡಿಮೆಯಾಗುತ್ತಿದೆ. ಅಲ್ಪಸ್ವಲ್ಪ ಸಿಗುವ ಅಂತರ್ಜಲ ಬಳಸಿಕೊಂಡು ಕೃಷಿ ಮಾಡಿ ಜೀವನ ನಡೆಸುವ ಸಂದರ್ಭ ಬಂದಿದೆ. ರೈತರು ಕೃಷಿ ಮಾಡುತ್ತಿರುವ ಗೋಮಾಳವನ್ನು ಉಳುವವನೇ ಭೂಮಿ ಒಡೆಯ ಯೋಜನೆಯಲ್ಲಿ ಜಿಲ್ಲೆಯ ಸಾವಿರಾರು ರೈತರಿಗೆ ಮಂಜೂರು ಮಾಡಲಾಗಿದೆ. ರೈತರು ಇನ್ನಷ್ಟು ಭೂಮಿ ಮಂಜೂರು ಮಾಡಲು ಸಾವಿರಾರು ಅರ್ಜಿ ಹಾಕಿ ಕಾಯುತ್ತಿದ್ದಾರೆ. ಸರ್ಕಾರ ಭೂಮಿ ಮಂಜೂರಾತಿ ಸಮಿತಿ ರಚಿಸಿದ್ದರೂ
ಅರ್ಜಿಗಳನ್ನು ಸರಿಯಾಗಿ ಪರಿಶೀಲನೆ ಮಾಡದೆ ವಜಾ ಮಾಡಲಾಗುತ್ತಿದೆ. ಯಾವ ಕಾರಣದಿಂದ ವಜಾ ಮಾಡಲಾಗುತ್ತಿದೆ. ಇದಕ್ಕೆ ನಿರ್ದಿಷ್ಟವಾದ ಕಾರಣಗಳೇನು’ ಎಂದು ಪ್ರಶ್ನಿಸಿದರು.
‘ಸುಮಾರು 60 ವರ್ಷಗಳಿಂದ ರೈತರಿಗೆ ಮಂಜೂರು ಮಾಡಿರುವ ಜಮೀನುಗಳನ್ನು ದುರಸ್ತಿ ಮಾಡಿ ಹೊಸ ಸರ್ವೆ ನಂಬರ್‌ಗಳನ್ನು ನೀಡಿಲ್ಲ, ಇದರಿಂದ ರೈತರು ತಮ್ಮ ಕುಟುಂಬದಲ್ಲಿ ವಿಭಾಗ ಮಾಡಿಕೊಳ್ಳಲು, ಜಮೀನಿನ ಮೇಲೆ ಸಾಲ ಪಡೆಯಲು, ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗದೆ ತೊಂದರೆಗೆ ಒಳಗಾಗಿದ್ದಾರೆ. ಶ್ರೀಮಂತರು ಮತ್ತು ರಿಯಲ್ ಎಸ್ಟೇಟ್ ಏಜೆಂಟರ ಜಮೀನುಗಳು ಮಾತ್ರ ಅಳತೆ ಮಾಡಿ ದುರಸ್ತಿ ಮಾಡಿಕೊಡಲಾಗುತ್ತಿದೆ. ಹೀಗಾಗಿ, ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ, ಅನುಮಾನ ಬರುತ್ತಿದೆ’ ಎಂದು ಆರೋಪಿಸಿದರು.
