ಉದಯವಾಹಿನಿ, ಆಲಮಟ್ಟಿ: ನೆರೆಯ ತೆಲಂಗಾಣ ರಾಜ್ಯವು ನಾರಾಯಣಪುರ ಜಲಾಶಯದಿಂದ 5 ಟಿಎಂಸಿ ಅಡಿ ನೀರನ್ನು ಕೃಷಿಗೆ ಹಾಗೂ ಕುಡಿಯುವ ನೀರಿಗಾಗಿ ರಂಗಾರೆಡ್ಡಿ, ಜಿಲ್ಲೆಯಲ್ಲಿನ ಜುರಾಲಾ ಅಣೆಕಟ್ಟೆಗೆ ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ಈ ಸಂಬಂಧ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಸಂಗ್ರಹ, ಲಭ್ಯತೆ, ಜೂನ್‌ವರೆಗೂ ಬಳಕೆಯ ಬಗ್ಗೆ
ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರು ಎರಡೂ ಜಲಾಶಯಗಳ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದಾರೆ. ನೀರಿನ ಲಭ್ಯತೆ: ಸದ್ಯ ಆಲಮಟ್ಟಿ ಜಲಾಶಯದಲ್ಲಿ 42.892 ಟಿಎಂಸಿ ಅಡಿ.
ನಾರಾಯಣಪುರ ಜಲಾಶಯದಲ್ಲಿ 13.22 ಟಿಎಂಸಿ ಅಡಿ ಸೇರಿ 56.112 ಟಿಎಂಸಿ ಅಡಿ ನೀರು ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂಗ್ರಹಿತ ನೀರಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳ ಜಾಲಕ್ಕೆ ಮಾರ್ಚ್ 23ರವರೆಗೆ ವಾರಾಬಂಧಿ ಪದ್ಧತಿಗೆ ಒಳಪಟ್ಟು ಇನ್ನೂ 23 ದಿನಗಳ ಕಾಲ ನೀರು ಹರಿಸಬೇಕಿದೆ. ಅಷ್ಟು ದಿನಗಳ ಕಾಲ ನೀರು ಹರಿಸಲು 22 ಟಿಎಂಸಿ ಅಡಿ ನೀರು ಅಗತ್ಯವಿದೆ. 34 ಟಿಎಂಸಿ ಅಡಿ ನೀರು ಉಳಿಯುತ್ತದೆ. ಅದರಲ್ಲಿ ಜೂನ್‌ವರೆಗೂ ಕುಡಿಯುವ ನೀರು, ಭಾಷಿಕರಣ, ವಿವಿಧ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ನೀರು ಪೂರೈಕೆ (ಕೂಡಗಿ, ಯರಮರಸ್, ರಾಯಚೂರು, ಬಳ್ಳಾರಿ ಮೊದಲಾದ ಉಷ್ಣ ವಿದ್ಯುತ್ ಸ್ನಾವರ), ಕೆರೆಗಳ ಭರ್ತಿ ಮತ್ತಿತರ ಬಳಕೆಗೆ 34 ಟಿಎಂಸಿ ಅಡಿ ನೀರು ಅಗತ್ಯ ಎಂದು ಹೇಳಿದರು.
ಜತೆಗೆ ಬೇಸಿಗೆಯಲ್ಲಿ ವಿವಿಧ ಕಡೆ ಕುಡಿಯುವ ನೀರಿನ ಕೊರತೆ ಉಂಟಾದರೆ ಮತ್ತೆ ಕಾಲುವೆಗಳ ಜಾಲದ ಮೂಲಕ ನೀರು ಹರಿಸಬೇಕಾಗುತ್ತದೆ. ಇಲ್ಲವೇ ಕೆಲ ಬೆಳೆ ಒಣಗುವ ಭೀತಿ ಆವರಿಸುತ್ತದೆ, ಅದಕ್ಕೂ ನೀರು ಒದಗಿಸುವ ಸ್ಥಿತಿ ಬರುತ್ತದೆ. ಹೀಗಾಗಿ ಜಲಾಶಯದಲ್ಲಿ ನೀರಿನ ಕೊರತೆ ಎದುರಾಗಲಿದೆ.
