ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆ ಹೊಂದಿರುವ ಮಂಡ್ಯ ಜಿಲ್ಲೆಯ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ ಹಾಗೂ ದುಡಿಯುವ ಬಂಡವಾಳಕ್ಕಾಗಿ 50 ಕೋಟಿ ರೂಪಾಯಿಯನ್ನು ಜೂನ್ 14ರಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಹಣ ಬಿಡುಗಡೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರಕಿದ ಒಂದೇ ವಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಣ ಬಿಡುಗಡೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌, ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಮಂಡ್ಯ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ ಗೂಳಿಗೌಡ ಅವರು ತಿಳಿಸಿದ್ದಾರೆ.
2023-24 ನೇ ಸಾಲಿನಲ್ಲಿ ಕಬ್ಬು ನುರಿಸಲು ಸರ್ಕಾರದಿಂದ ತುರ್ತಾಗಿ ಧನ ಸಹಾಯ ನೀಡಬೇಕೆಂದು ತಾವು ಮಾಡಿದ್ದ ಮನವಿಗೆ ಸ್ಪಂದಿಸಿ ಸಿಎಂ ತಕ್ಷಣವೇ ಹಣ ಬಿಡುಗಡೆಗೆ ವ್ಯವಸ್ಥೆ ಮಾಡಿದ್ದಾರೆ. ಇದು ಈ ಭಾಗದ ರೈತರಿಗೆ ವರದಾನವಾಗಿದೆ. ರೈತರ ಹಿತದೃಷ್ಟಿಯಿಂದ ಕೂಡಲೇ ಹಣ ಮಂಜೂರಿ ಮಾಡಿರುವುದಕ್ಕೆ ರೈತರ ಪರವಾಗಿ ಹಾಗೂ ಮಂಡ್ಯ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಕಬ್ಬು ಕಟಾವು ಪ್ರಾರಂಭವಾಗುವ ಮೊದಲು ಗ್ಯಾಂಗ್‌ಗಳಿಗೆ ನೀಡಲು ಹಣದ ಅವಶ್ಯಕತೆ ಇದೆ. ಯಂತ್ರಗಳ ದುರಸ್ತಿಗಳೂ ಇವೆ. ಅದಕ್ಕಾಗಿ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು. ಹೀಗಾಗಿ ಕಾರ್ಖಾನೆ ಪ್ರಾರಂಭೋತ್ಸವ ಹಾಗೂ ಗ್ಯಾಂಗ್‌ಗಳಿಗೆ ನೀಡಲು 15 ಕೋಟಿ ರೂ. ಹಾಗೂ ಕಾರ್ಖಾನೆಯ ದುಡಿಯುವ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್ ) ಗಾಗಿ 35 ಕೋಟಿ ರೂ. ನೀಡಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿತ್ತು. ಈಗ ರಾಜ್ಯ ಸರ್ಕಾರ ಅನುದಾನವನ್ನೂ ಬಿಡುಗಡೆ ಮಾಡಿದೆ.
ಸರ್ಕಾರದ ಈ ಸಹಾಯದಿಂದ ಅವಧಿಗೆ ಸರಿಯಾಗಿ ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆ ಪ್ರಾರಂಭಿಸಲು ಅನುಕೂಲವಾಗಲಿದೆ. ರೈತರಿಗೆ ಸಕಾಲದಲ್ಲಿ ಕಬ್ಬು ಕಟಾವು ಹಾಗೂ ಹಣ ಬಿಡುಗಡೆಗೂ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!