ಉದಯವಾಹಿನಿ, ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ಪುನಾರಚನೆ ಮಾಡಿ ಸಣ್ಣ ಸಣ್ಣ ಪಾಲಿಕೆಗಳನ್ನಾಗಿ ಮಾಡಲು 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ನೀಡಲು ರಚಿತವಾಗಿದ್ದ ಕರ್ನಾಟಕ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ಶಿಫಾರಸ್ಸು ಮಾಡಿದೆ.
ವಿಧಾನಸೌಧದಲ್ಲಿಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ, ಸಮಿತಿಯ ಅಧ್ಯಕ್ಷರಾದ ಶಾಸಕ ರಿಜ್ವಾನ್ ಅರ್ಷದ್, ಸದಸ್ಯರಾದ ಎಸ್.ಟಿ.ಸೋಮಶೇಖರ್, ಪ್ರಿಯಾಕೃಷ್ಣ, ಆನೇಕಲ್ ಶಿವಣ್ಣ, ಶ್ರೀನಿವಾಸ್, ಜವರಾಯಿಗೌಡ ಅವರು ವರದಿ ಸಲ್ಲಿಸಿದರು.
ವರದಿ ಸಲ್ಲಿಕೆ ನಂತರ ಮಾತನಾಡಿದ ರಿಜ್ವಾನ್ ಅರ್ಷದ್, ಬಿಬಿಎಂಪಿಯನ್ನು ಏಳು ಸಣ್ಣ ಸಣ್ಣಪಾಲಿಕೆಯಾಗಿ ಆಡಳಿತ ದೃಷ್ಟಿಯಿಂದ ವಿಭಜನೆ ಮಾಡಲು ಅವಕಾಶ ಕಲ್ಪಿಸಿ ಶಿಫಾರಸ್ಸು ಮಾಡಲಾಗಿದೆ. ಎಷ್ಟು ಪಾಲಿಕೆ ಮಾಡಬೇಕೆಂಬುದು ಸರ್ಕಾರಕ್ಕೆ ಬಿಟ್ಟ ವಿಷಯ. ಈಗ ಬಿಬಿಎಂಪಿ ಆಡಳಿತ ವೈಖರಿಯಿಂದ ತೃಪ್ತಿಯಾಗಿಲ್ಲ, ಅಲ್ಲದೆ ಬೆಸ್ಕಾಂ, ಬಿಡಬ್ಲ್ಯುಎಸ್ ಎಸ್ ಬಿ ಮೊದಲಾದ ಸಂಸ್ಥೆಗಳ ನಡುವೆ ಸಮನ್ವಯತೆ ಇಲ್ಲ, ಹೀಗಾಗಿ ಗ್ರೇಟರ್ ಬೆಂಗಳೂರು ಅಥಾರಿಟಿ ಅಸ್ತಿತ್ವಕ್ಕೆ ತರಲು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಬೆಂಗಳೂರು ಉಸ್ತುವಾರಿ ಇರುತ್ತಾರೆ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೆಸ್ಕಾಂ, ಬಿಡಬ್ಲ್ಯುಎಸ್‌ಎಸ್ಎಸ್‌ಬಿ, ಮೆಟ್ರೋ ರೈಲು ಮೊದಲಾದ ಸಂಸ್ಥೆಗಳ ನಡುವೆ ಸಮನ್ವಯತೆ ಸಾಧಿಸಲಿದೆ. ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತದೆ. ಮೂರು ತಿಂಗಳಿಗೊಮ್ಮೆ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಸಲಹೆ ಮಾಡಲಾಗಿದೆ. ಬಿಬಿಎಂಪಿಗೆ ಹೊಸ ರೂಪ ನೀಡಬೇಕಾಗಿದ್ದು, ಹೊಸದಾಗಿ ಅಸ್ತಿತ್ವಕ್ಕೆ ಬರುವ ಪ್ರತಿ ಪಾಲಿಕೆಗಳಿಗೆ 100ರಿಂದ 125 ವಾರ್ಡ್‌ಗಳಿರಬೇಕು. ಮೇಯರ್ ಅವಧಿ 30 ತಿಂಗಳ ಅವಧಿ ಇರಬೇಕು ಎಂಬ ಶಿಫಾರಸ್ಸು ಮಾಡಲಾಗಿದೆ.
