ಉದಯವಾಹಿನಿ, ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಕುಂಜಳ್ಳಿ ಸುತ್ತ ಪ್ರತಿದಿನ ರಾತ್ರಿ ಕಾಡಾನೆಯೊಂದು ತೋಟಕ್ಕೆ ನುಗ್ಗಿ ಬೆಳೆ ಹಾಳು ಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಒಂಟಿ ಆನೆಯೊಂದು ಕುಂಜಳ್ಳಿ, ಅರಳಿಕೊಪ್ಪ, ಕಾಡು ಸಿಗಸೆ ಸುತ್ತಲಿನ ಹಳ್ಳಿಗಳ ವ್ಯಾಪ್ತಿಯಲ್ಲಿ ನಿತ್ಯ ದಾಳಿ ಮಾಡುತ್ತಿದ್ದು ಕುಂಜಳ್ಳಿಯ ಸುಬೋದ್ ಎಂಬುವವರಿಗೆ ಸೇರಿದ 50ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಮುರಿದು ಹಾನಿ ಮಾಡಿದೆ. ಆನೆ ಬೆಳಹಾನಿ ಮಾಡಿರುವ ಪ್ರದೇಶವು ಚಿಕ್ಕಗ್ರಹಾರ ವಲಯಕ್ಕೆ ಸೇರಿದ್ದು.
ಗ್ರಾಮಸ್ಥರು ಆನೆಯನ್ನು ಒಡಿಸಿದಾಗ ಅದು ಕೊಪ್ಪ ಅರಣ್ಯ ವಿಭಾಗದ ಅಡಿಗೆಬೈಲು ಕಾಡಿನತ್ತ ಹೋಗಿದೆ. ಈಗ ಎರಡೂ ಕಡೆಯ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ’ ಎಂದು ಸ್ಥಳೀಯರು ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಅರಳಿಕೊಪ್ಪ ಬಳಿಯ ಕಾಲೋನಿ ರಸ್ತೆಯಲ್ಲಿ ಆನೆ ಕಾಣಿಸಿಕೊಂಡಿದೆ. ಕಾಡಾನೆ ಭಯದಿಂದ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ತಿರುಗಾಡುವಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಆನೆ ಹಾವಳಿ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಶಾಸಕ ಟಿ.ಡಿ.ರಾಜೇಗೌಡರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿಲ್ಲ. ಜನರ ಜೀವಕ್ಕೆ ಹಾನಿಯಾದರೆ ಅಧಿಕಾರಿಗಳು, ಸರ್ಕಾರವೇ ಹೊಣೆ ಎಂದು ಗ್ರಾಮಸ್ತ ಕುಂಜಳ್ಳಿ ಸುಬೋದ್ ಹೇಳಿದರು.
