ಉದಯವಾಹಿನಿ,ಬೆಂಗಳೂರು: ಭಾಷೆ ವಿಷಯದಲ್ಲಿ ಕೀಳು ರಾಜಕಾರಣ ಮಾಡುವ ಕಾಂಗ್ರೆಸ್‌ನವರು ಕನ್ನಡದ ಕೆಲಸಕ್ಕೆ ಕವಡೆ ಕಿಮ್ಮತ್ತು ಕೊಡುತ್ತಿಲ್ಲ. ನಾಡು-ನುಡಿ, ಸಂಸ್ಕೃತಿಯ ಬೆಳವಣಿಗೆಗೆ ನೀಡಬೇಕಿದ್ದ ಅನುದಾನಕ್ಕೆ ಕೊಕ್ಕೆ ಹಾಕುವ ಮೂಲಕ ರಾಜ್ಯ ಸರ್ಕಾರ ಮಾತೃಭಾಷೆಗೆ ದ್ರೋಹ ಬಗೆದಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡವೆಂದರೆ ಕನಿಷ್ಠ, ಸಂಸ್ಕೃತಿ ಅಂದರೆ ತಾತ್ಸಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರ, ದುರಾಡಳಿತದಿಂದ ರಾಜ್ಯದ ಬೊಕ್ಕಸವನ್ನು ಬರಿದು ಮಾಡಿರುವ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ, ಕಲಾವಿದರಿಗೆ ಪಿಂಚಣಿ ನೀಡುವುದಕ್ಕೆ ಹಣವಿಲ್ಲ. ಕಲಾತಂಡಗಳಿಗೆ ಧನ ಸಹಾಯಕ್ಕೆ ದುಡ್ಡಿಲ್ಲ. ರಂಗಮಂದಿರ, ಬಯಲು ಮಂದಿರಗಳಿಗೆ ಹಣ ನೀಡುತ್ತಿಲ್ಲ. ಕನ್ನಡ-ಸಂಸ್ಕೃತಿ ಇಲಾಖೆಗೆ ನಿಗದಿ ಹಣ ನೀಡುತ್ತಿಲ್ಲ. ಕಲೆ ಮತ್ತು ಸಂಸ್ಕೃತಿಗೆ ಮೀಸಲು ಹಣವಿಲ್ಲ. ಕಲಾಸಂಘಗಳಿಗೂ ನೀಡುವುದಕ್ಕೂ ರೊಕ್ಕವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.ಕಾಂಗ್ರೆಸ್ ಸರ್ಕಾರ -ಕಾಟಾಚಾರದ ಸರ್ಕಾರ, ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಬಡವರು, ರೈತರನ್ನು ಕಾಪಾಡಲು ಕಾಂಗ್ರೆಸ್ ಸರ್ಕಾರಕ್ಕೆ ಇಚ್ಚಾಶಕ್ತಿಯೇ ಇಲ್ಲ. ಕಾಟಾಚಾರಕ್ಕೆ ಸುಗ್ರೀವಾಜ್ಞೆ ಹೊರಡಿಸಿ ಈಗ ಕೈಕಟ್ಟಿ ಕುಳಿತಿರುವ ಕಾಂಗ್ರೆಸ್ ಸರ್ಕಾರದ ಧೋರಣೆಯಿಂದ ತುಮಕೂರು ಹಾಗು ಕೋಲಾರ ಜಿಲ್ಲೆಗಳಲ್ಲಿ ಮತ್ತೆ ಮೂರು ಅಮಾಯಕ ಜೀವಿಗಳು ಬಲಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೋಲಾರದ ಕಾಂಗ್ರೆಸ್ ಶಾಸಕರಾದ ಕೊತ್ತೂರು ಮಂಜುನಾಥ್ ಅವರ ತವರೂರಿನಲ್ಲೇ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಚುನಾವಣೆ ಸಂದರ್ಭದಲ್ಲಿ ಕೋಲಾರದಲ್ಲಿ ಸ್ಪರ್ಧಿಸಲು ಹೊರಟಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಈಗ ಕೋಲಾರ ಜಿಲ್ಲೆ ಸಂಪೂರ್ಣ ಮರೆತುಹೋಗಿದೆ ಎಂದು ಅವರು ಕಿಡಿಕಾರಿದ್ದಾರೆ.
