ಉದಯವಾಹಿನಿ, ಬೆಂಗಳೂರು: ಬೆಳಗಾವಿಯಲ್ಲಿ ನಡೆದ ಕರ್ನಾಟಕದ ಬಸ್ ನಿರ್ವಾಹಕರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಇಎಸ್ ಪುಂಡರ ಅಟ್ಟಹಾಸದ ವಿರುದ್ಧ ಕನ್ನಡ ಪರ ಹೋರಾಟಗಾರರು ಮೈಸೂರು ಬ್ಯಾಂಕ್ ವೃತ್ತ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ನಗರದಲ್ಲಿಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಜಮಾಯಿಸಿದ ಕನ್ನಡ ಪರ ಹೋರಾಟಗಾರರು, ಕನ್ನಡಕ್ಕೆ ಅಗೌರವ ತೋರಿದ ಪೊಲೀಸ್ ಸಿಬ್ಬಂದಿಯನ್ನು ಕೇವಲ ವರ್ಗಾವಣೆ ಮಾಡಿದರೆ ಸಾಲದು, ಅಮಾನತು ಮಾಡಬೇಕು. ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು, ಮಹಾರಾಷ್ಟ್ರ ಪುಂಡರ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಅಲ್ಲದೆ, ರಾಜಕೀಯ ಲಾಭಕ್ಕೆ ಶಿವಸೇನಾ, ಎಂಇಎಸ್‌ನವರು ಗೂಂಡಾಗಿರಿ ನಡೆಸಿದ್ದಾರೆ. ಮನ ಬಂದಂತೆ ದೌರ್ಜನ್ಯ ಮಾಡುವುದು ಒಳ್ಳೆಯದಲ್ಲ. ಆದಷ್ಟು ಬೇಗ ಬೆಳಗಾವಿಯ ಮರಾಠಿಗರೆಲ್ಲರೂ ಜೈ ಕರ್ನಾಟಕ ಎಂದು ಹೇಳುವ ದಿನಗಳು ಬರಲಿವೆ. ಕನ್ನಡನಾಡು, ನುಡಿಗೆ ಆದ್ಯತೆ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದು ಕನ್ನಡ ಭೂಮಿ. ಮರಾಠಿಗರು ಈ ನೆಲಕ್ಕೆ ಬಂದಿದ್ದರೆ ಅವರು ನಮ್ಮ ಅತಿಥಿಗಳು ಅಷ್ಟೆ. ಕನ್ನಡ ನೆಲದವರು ಅಲ್ಲ. ಇದನ್ನು ಅರಿತುಕೊಂಡು ಬದುಕುವುದನ್ನು ಕಲಿಯಬೇಕು. ಅದನ್ನು ಮೆರೆತು ನಡೆದುಕೊಳ್ಳುವುದು ಈ ನೆಲದಲ್ಲಿ ನಡೆಯುವುದಿಲ್ಲ. ನಿಮಗೆ ಮರಾಠಿ ಪ್ರೇಮ ಇದ್ದರೆ ಮಹಾರಾಷ್ಟ್ರದಲ್ಲಿ ಇಟ್ಟುಕೊಳ್ಳಿ. ಕನ್ನಡ ನೆಲದಲ್ಲಿ ಅಲ್ಲ’ ಎಂದು ಎಂಇಎಸ್ ಮರಾಠಿ ಗೂಂಡಾಗಳಿಗೆ ಹೋರಾಟಗಾರರು ಖಡಕ್ ಎಚ್ಚರಿಕೆ ಕೊಟ್ಟರು.
ಬೆಳಗಾವಿ ಕರ್ನಾಟಕದ್ದು. ಅದನ್ನು ಅರ್ಥ ಮಾಡಿಕೊಂಡು ಬದುಕುವುದನ್ನು ಕಲಿಯಬೇಕು. ಪಕ್ಕದಲ್ಲಿ ರಾಜ್ಯವನ್ನು ಇಟ್ಟುಕೊಂಡು ಕನ್ನಡ ಮಾತನಾಡುವವರ ಮೇಲೆ ದಬ್ಬಾಳಿಕೆ ಮಾಡುವುದು ಕಂಡು ಬಂದರೆ ಗಂಟು ಮೂಟೆ ಕಟ್ಟಿಕೊಂಡು ಹೋಗಿ ಬಿಡಿ.
ನಿಮ್ಮ ಬೇರುಗಳನ್ನು ಕಟ್ ಮಾಡಿದ್ದೇವೆ. ನಿಮ್ಮ ಶಾಸಕರನ್ನು ಕಿತ್ತು ಬೀಸಾಡಿದ್ದೇವೆ. ನಿಮಗಿನ್ನೂ ಬಿದ್ದು ಬಂದಿಲ್ಲ. ಈ ರೀತಿಯ ದಬ್ಬಾಳಿಕೆ ಮಾಡಿದ್ದನ್ನು ಕನ್ನಡ ಪರ ಹೋರಾಟಗಾರರು ಸಹಿಸುವುದಿಲ್ಲ ಎಂದರು.
