ಉದಯವಾಹಿನಿ, ಹೊಸದುರ್ಗ: ವಿವಿಧ ಪಂಗಡಗಳಾಗಿ ಹರಿದು ಹಂಚಿ ಹೋಗಿದ್ದ ಕುಂಚಿಟಿಗ ಸಮುದಾಯದ ಸಂಘಟನೆಗಾಗಿಯೇ ಶಾಂತವೀರ ಸ್ವಾಮೀಜಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ತಾಲ್ಲೂಕಿನ ಮಾಡದಕೆರೆ ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಶ್ರೀನಿವಾಸಪ್ಪ ಹಾಗೂ ಸುಲೋಚಮ್ಮ ದಂಪತಿಯ ಸುಪುತ್ರರಾಗಿ (ಪೂರ್ವಾಶ್ರಮ) 1980ರ ಫೆಬ್ರುವರಿ 28ರಂದು ಜನಿಸಿದ ಶ್ರೀಗಳು ಸಮುದಾಯದ ಒಳಿತಿಗಾಗಿ ಹೆಜ್ಜೆ ಇಡುತ್ತಿದ್ದಾರೆ. ಶಾಂತವೀರ ಸ್ವಾಮೀಜಿ ಬಾಲ್ಯಾವಸ್ಥೆಯಲ್ಲಿಯೇ ಸಮಾಜದ ಅಭಿವೃದ್ಧಿಯ ಕನಸು ಕಂಡವರು, ಚಿತ್ರದುರ್ಗದ ಮುರುಘಾಮಠದಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮುಗಿಸಿದರು. 1997ರ ಜುಲೈ 22ರಂದು ಸಮಾಜದ ಸಂಘಟನೆಗಾಗಿ ದೀಕ್ಷೆ ಪಡೆದು ಪೀಠ ಪ್ರಾರಂಭಿಸುವ ಮೂಲಕ ವಿನೂತನ ಕಾರ್ಯಕ್ಕೆ ಅಡಿಪಾಯ ಹಾಕಿದರು.
ಶೂನ್ಯ ಪರಂಪರೆಯಿಂದ ಶ್ರೀಮಠವನ್ನು ಆರಂಭಿಸಿದರು. ಶ್ರೀಗಳು ಹಗಲು ರಾತ್ರಿ ಎನ್ನದೆ ರಾಜ್ಯ, ಹೊರರಾಜ್ಯಗಳಲ್ಲಿ ಭಕ್ತರನ್ನು ಸಂಘಟಿಸಿದರು. ನಿರಂತರ ಪರಿಶ್ರಮದ ಫಲವಾಗಿ ಶ್ರೀಮಠ ಇಂದು ಸ್ವಂತ ದುಡಿಮೆ ಹಾಗೂ ಭಕ್ತರ ಸಹಕಾರದಿಂದ 250 ಕೋಟಿಗೂ ಅಧಿಕ ಬೆಲೆಬಾಳುವ ಆಸ್ತಿ ಹೊಂದಿದೆ.
ಕೇವಲ ಸಮುದಾಯದ ಸಂಘಟನೆ ಮಾತ್ರವಲ್ಲ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಹೆಚ್ಚು ದುಡಿಯುತ್ತಿದ್ದಾರೆ. ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಐಮಂಗಲ, ಚಿತ್ರದುರ್ಗ, ಸಂತೆಬೆನ್ನೂರು, ಹೊಸದುರ್ಗ ಸೇರಿದಂತೆ ವಿವಿಧೆಡೆ ಒಟ್ಟಾರೆ 45 ಎಕರೆ ಕೃಷಿ ಭೂಮಿಯನ್ನು ಹೊಂದಿರುವ ಇವರು ದಾಳಿಂಬೆ ಬೆಳೆಯುವ ಮೂಲಕ ರಾಜ್ಯದಾದ್ಯಂತ ‘ಕಾಯಕಯೋಗಿ’ ಎಂದು ಹೆಸರು ಪಡೆದಿದ್ದಾರೆ.
