ಉದಯವಾಹಿನಿ, ಮಂಡ್ಯ: ‘ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ₹14,488 ಕೋಟಿಯನ್ನು ಮುಂಬರುವ ಬಜೆಟ್‌ನಲ್ಲಿ ಮತ್ತೆ ದುರ್ಬಳಕೆ ಮಾಡಲು ರಾಜ್ಯ ಸರ್ಕಾರ ಹೊಂಚು ಹಾಕಿದೆ. ಗ್ಯಾರಂಟಿ ಯೋಜನೆಗಳಿಗಾಗಿ ‘ದಲಿತರ ಮೀಸಲು ನಿಧಿ’ಯನ್ನು ಬಳಸಿಕೊಳ್ಳುವುದನ್ನು ಖಂಡಿಸಿ ಪ್ರತಿ ಜಿಲ್ಲೆಯಲ್ಲೂ ‘ಜನಾಂದೋಲನ ಹಮ್ಮಿಕೊಂಡಿದ್ದೇವೆ’ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸರ್ಕಾರದ ದಲಿತ ವಿರೋಧಿ ನೀತಿಯನ್ನು ಒಪ್ಪುವುದಿಲ್ಲ ಸದನದ ಹೊರಗೆ ಮತ್ತು ಒಳಗೆ ಹೋರಾಟ ತೀವ್ರಗೊಳಿಸುತ್ತೇವೆ. ಜನರು ಪ್ರತಿ ತಾಲ್ಲೂಕಿನಲ್ಲೂ ಬೀದಿಗಿಳಿದು ಪ್ರತಿಭಟಿಸಲಿದ್ದಾರೆ’ ಎಂದರು.
‘2023 ಮತ್ತು 2024ರಲ್ಲಿ ‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ’ಯಿಂದ ₹14,282 ಕೋಟಿಯನ್ನು ಗ್ಯಾರಂಟಿ ಅನುಷ್ಠಾನಕ್ಕಾಗಿ ಕಾಂಗ್ರೆಸ್‌ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಅಲ್ಪಸಂಖ್ಯಾತರಿಗೆಂದೇ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಸಾವಿರಾರು ಕೋಟಿ ರೂಪಾಯಿ ಅನುದಾನ ತೆಗೆದಿರಿಸಲಾಗಿದೆ. ಆದರೆ, ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಆ ಹಣ ಮುಟ್ಟುವುದಿಲ್ಲ. ದಲಿತರ ಕಾಲೊನಿಗಳಿಗೆ, ಆದಿವಾಸಿ ಹಾಡಿಗಳಿಗೆ ಮೂಲಸೌಕರ್ಯ ಕಲ್ಪಿಸಿಲ್ಲ. ಈ ಸರ್ಕಾರ ದಲಿತ ದ್ರೋಹಿ ಅಲ್ಲದೆ ಮತ್ತೇನು? ಎಂದು ಕೇಳಿದರು. ‘ಅಂಬೇಡ್ಕರ್, ಆದಿಜಾಂಬವ, ತಾಂಡಾ, ಬೋವಿ ವಾಲ್ಮೀಕಿ ಹಾಗೂ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗಳು ಸರ್ಕಾರದ ಹಣಕಾಸಿನ ನೆರವಿಲ್ಲದೆ ಸೊರಗಿವೆ. ಸಾರಿಗೆ-ಸಂಬಳಕ್ಕೂ ಕಾಸಿಲ್ಲದೆ ದಿವಾಳಿ ಸ್ಥಿತಿಯಲ್ಲಿವೆ’ ಎಂದು ದೂರಿದರು.

Leave a Reply

Your email address will not be published. Required fields are marked *

error: Content is protected !!