ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಇದೇ ಮೊದಲ ಬಾರಿಗೆ ಏರ್ಪಡಿಸಿರುವ ಪುಸ್ತಕ ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬೆಂಗಳೂರು ಮಾತ್ರವಲ್ಲದೆ, ಹೊರ ಭಾಗದಿಂದಲೂ ಸಾವಿರಾರು ಜನ ವಿಧಾನಸೌಧ ಪ್ರವೇಶಿಸಲು ಮುಗಿಬಿದ್ದರು.
ಮೂರು ದಿನಗಳ ಕಾಲ ಸಾರ್ವಜನಿಕರಿಗೆ ಪ್ರವೇಶ ನೀಡಿರುವ ಹಿನ್ನೆಲೆ ಎರಡನೇ ದಿನವಾದ ಶನಿವಾರ ಸಾವಿರಾರು ಪುಸ್ತಕ ಪ್ರಿಯರು ಆಗಮಿಸಿ ಪುಸ್ತಕ ಮಳಿಗೆಗೆ ಲಗ್ಗೆ ಇಟ್ಟರು. ಅದರಲ್ಲೂ ವಿಧಾನ ಸೌಧ ಆವರಣ, ವಿಕಾಸಸೌಧ, ಗಾಂಧಿ ಪ್ರತಿಮೆ ಬಳಿ ಹೆಚ್ಚಿನ ಜನರು ಜಮಾವಣೆಗೊಂಡ ದೃಶ್ಯಗಳು ಕಂಡುಬಂದವು.
ಸಾಹಿತ್ಯಾಸಕ್ತರು, ಪುಸ್ತಕ ಪ್ರಿಯರು, ವಿದ್ಯಾರ್ಥಿಗಳು, ವಯೋವೃದ್ದರೂ ಪುಸ್ತಕ ಮೇಳಕ್ಕೆ ಆಗಮಿಸಿ ಪುಸ್ತಕ ಖರೀದಿಸಿದರು. ಇತ್ತ ವಿಧಾನಸೌಧದಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ನೌಕರರು, ಸಚಿವಾಲಯದ ಸಿಬ್ಬಂದಿ ಪುಸ್ತಕ ಮೇಳ ವೀಕ್ಷಿಸಿ ಹೊತ್ತಗೆಗಳನ್ನು ಖರೀದಿಸಿದರು.
ಒಟ್ಟಿನಲ್ಲಿ ವಿಧಾನಸೌಧ ಆವರಣವೂ ಜಾತ್ರೆಯ ರೂಪಕ ಪಡೆದುಕೊಂಡಿತು.
ವಿಧಾನಸೌಧದ ಆವರಣದಲ್ಲಿ ೧೫೧ ಪುಸ್ತಕ ಮಳಿಗೆಗಳನ್ನು ಹಾಕಲಾಗಿದ್ದು, ವಿವಿಧ ಅಕಾಡೆಮಿಗಳ ಮಳಿಗೆಗಳು, ಖಾಸಗಿ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಇದರ ಜೊತೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಹಾಗಾಗಿ, ಜನ ಜಾತ್ರೆಯಂತೆ ಮಳಿಗೆಗಳ ಬಳಿ ಸೇರಿದ ದೃಶ್ಯಗಳು ಕಂಡು ಬಂದವು. ಬಸವಣ್ಣ ರಾಜ ಮಹಾರಾಜರ ಬಗೆಗಿನ ಕೃತಿಗಳು, ಹಿಂದಿನ ಸಾಹಿತಿಗಳು, ಬರಹಗಾರರು ಹಾಗೂ ಈಗಿನ ಸಾಹಿತಿ ಮತ್ತು ಬರಹಗಾರರವರೆಗೂ ಪುಸ್ತಕಗಳು ಮಾರಾಟದ ಮಳಿಗೆಯಲ್ಲಿವೆ. ಅದೇ ರೀತಿ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳು, ಮಕ್ಕಳ ಕಲಿಕೆಯ ಪುಸ್ತಕಗಳು ಮಳಿಗೆಗಳಲ್ಲಿ ಕಂಡಬಂದವು.

Leave a Reply

Your email address will not be published. Required fields are marked *

error: Content is protected !!