ಉದಯವಾಹಿನಿ, ವಡಗೇರಾ: ತಾಲ್ಲೂಕು ಕೇಂದ್ರದಲ್ಲಿ ರಸ್ತೆಯ ಮೇಲೆಯೇ ತರಕಾರಿ ಮಾರಾಟ ಮಾಡುತ್ತಿದ್ದು ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ವಡಗೇರಾ ಪಟ್ಟಣದಲ್ಲಿ ತರಕಾರಿ ಮಾರಾಟ ಮಾಡಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ತರಕಾರಿ ಮಾರಾಟ ಮಾಡುವವರು ಜಿಲ್ಲಾ ಮುಖ್ಯ ರಸ್ತೆಯ ಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ಹಾಗೂ ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ.
ತರಕಾರಿ ಮೇಲೆ ದೂಳು: ಜಿಲ್ಲಾ ಮುಖ್ಯ ರಸ್ತೆಯ ಮೇಲೆ ದಿನಾಲು ಸಾಕಷ್ಟು ವಾಹನಗಳು ಸಂಚರಿಸುವುದರಿಂದ ರಸ್ತೆಯ ಮೇಲೆ ಇದ್ದ ದೂಳು ತರಕಾರಿಗೆ ಅಂಟಿಕೊಳ್ಳುತ್ತದೆ ಅದೇ ತರಕಾರಿಯನ್ನು ಜನರು ಖರೀದಿಸುವುದು ಅನಿರ್ವಾವಾಗಿದೆ. ಸುಗಮ ಸಂಚಾರಕ್ಕೆ ತೊಂದರೆ: ತಾಲ್ಲೂಕು ಕೇಂದ್ರವಾದಾಗಿನಿಂದ ಪಟ್ಟಣದಲ್ಲಿ ವಾಹನ ಸಂಚಾರ ಹೆಚ್ಚಳವಾಗಿದೆ. ಪಟ್ಟಣದ ಪ್ರಮುಖ ರಸ್ತೆ ವಿಸ್ತರಣೆ ಕೂಡ ಮಾಡಲಾಗಿದೆ. ಆದರೆ, ಈಗ ತರಕಾರಿ ಮಾರುವವರು ಇದೇ ರಸ್ತೆಯಲ್ಲಿ ಪಕ್ಕದಲ್ಲಿಯೇ ತರಕಾರಿ ಮಾರಾಟ
ಮಾಡುತ್ತಿರುವುದರಿಂದ ರಸ್ತೆಯೇ ಉಪಯೋಗಕ್ಕೆ ಬಾರದಂತಾಗಿದೆ ಎಂದು ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.
