ಉದಯವಾಹಿನಿ, ಕುಷ್ಟಗಿ: ದೇವರ ಮುಂದೆ ಕುಳಿತು ಮಾಡುವ ಪೂಜೆ ಕೇವಲ ಸಾಂಕೇತಿಕ ಹಾಗಾಗಿ ಉಳಿದ ಇಡೀ ದಿನದ ಕ್ಷಣಕ್ಷಣದಲ್ಲೂ, ಮನಪೂರ್ವಕವಾಗಿ ಭಗವಂತನ ಚಿಂತನೆ ನಡೆಸುವುದೇ ನಿಜವಾದ ಪೂಜೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸೋಮವಾರ ಹೇಳಿದರು.ಪಟ್ಟಣದ ಅಡವಿಮುಖ್ಯಪ್ರಾಣದೇವರ ದೇವಸ್ಥಾನದಲ್ಲಿ ನಡೆಯುತ್ತಿರುವ ರಾಘವೇಂದ್ರ ಯತಿಗಳ 32ನೇ ಸಪ್ತಾಹ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ಪೂಜೆ ಕುಳಿತರೂ ನಮ್ಮ ಮನಸ್ಸು ಮಾತ್ರ ಎಲ್ಲೆ ಮೀರಿ ಒಡುತ್ತಿರುತ್ತದೆ.
ಲೋಕ ವ್ಯವಹಾರಗಳ ಹೊರತಾಗಿ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಬೇಕು. ದೇವರ ಮುಂದೆ ನಾವು ಏನೆಲ್ಲ ಕೇಳುತ್ತೇವೆ. ಆದರೆ ದೇವರು ಮಾತ್ರ ನಮ್ಮಿಂದ ಭಕ್ತಿಪೂರ್ವಕ ಮನಸ್ಸನ್ನು ಬಯಸುತ್ತಾನೆ.
ದೈನಂದಿನ ಬದುಕಿನಲ್ಲಿ ಕೆಲಸ ಮಾಡುವುದು ಎಷ್ಟು ಮುಖ್ಯವೊ ಭಗವಂತನ ಸ್ಮರಣೆಯಲ್ಲಿ ಶ್ರದ್ಧೆಯೂ ಅಷ್ಟೇ ಮುಖ್ಯ’ ಎಂದರು.
‘ಮನದಲ್ಲಿ ನಾವು ಯಾವ ರೂಪವನ್ನು ಚಿಂತಿಸುತ್ತಿರುತ್ತೇವೆಯೊ ಅದೇ ರೀತಿ ಭಗವಂತನ ಕರುಣೆ ಇರುತ್ತದೆ. ಇಂದ್ರಿಯಗಳ ಮೇಲೆ ಹತೋಟಿ ಇಲ್ಲದಿದ್ದರೆ ಬದುಕು ಸಾರ್ಥಕ ಎನಿಸದು. ಬದುಕಿನುದ್ದಕ್ಕೂ ಈ ವಿಷಯದಲ್ಲಿ ಎಚ್ಚರವಾಗಿರಬೇಕು. ಹಾಗಾಗಿ ದೇವರ ಚಿಂತನೆಗೆ ಬೇಕಾಗುವ ಸ್ಫೂರ್ತಿಗಾಗಿಯೇ ಪೂಜೆ ಮಾಡಬೇಕಾಗುತ್ತದೆ ಭಗವಂತ ಸರ್ವಾಂತರಯಾಮಿಯಾಗಿದ್ದಾನೆ ಎಂಬುದನ್ನು ನಿರೂಪಿಸಿದವರೇ ಪ್ರಹ್ಲಾದರಾಯರು. ಅಂಥ ಭಕ್ತರು ನಾವಾಗಬೇಕು. ಶರಣು ಬಂದವರಿಗೆಲ್ಲ ಕರುಣೆ ತೋರುವ ಗುರುರಾಘವೇಂದ್ರರು ತೋರಿದ ದಾರಿಯಲ್ಲಿ ನಡೆಯುವ ಮೂಲಕ ನಮ್ಮ ಜೀವನವನ್ನು
ಅರ್ಥಪೂರ್ಣವಾಗಿಸಿಕೊಳ್ಳೋಣ’ ಎಂದು ಹೇಳಿದರು. ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
