ಉದಯವಾಹಿನಿ, ಕಲಬುರಗಿ: ಕಬ್ಬಿಣದ ರಾಡ್‍ನಿಂದ ಹೊಡೆದು ರೌಡಿಶೀಟರ್ ಒಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಕಾಕಡೆ ಚೌಕ್‍ನ ಲಂಗರ ಹನುಮಾನ ಮಂದಿರ ಹತ್ತಿರ ಇಂದು ಬೆಳಗಿನ ಜಾವ ನಡೆದಿದೆ.
ನಗರದ ಫಿಲ್ಟರ್ ಬೆಡ್ ರಸ್ತೆಯ ಭವಾನಿ ನಗರದ ನಿವಾಸಿ ವಿರೇಶ ಅಲಿಯಾಸ್ ಸಾರಥಿ ತಂದೆ ಶ್ರೀಕಾಂತ ಬಿರಾದಾರ (25) ಕೊಲೆಯಾದವರು.
ಕೊಲೆಯಾದ ವಿರೇಶ ಕಾಕಡೆ ಚೌಕ್‍ನ ಲಂಗರ ಹನುಮಾನ ಮಂದಿರ ಹತ್ತಿರ ನಾಲ್ವರು ಗೆಳೆಯರೊಂದಿಗೆ ಸೇರಿ ಪಾರ್ಟಿ ಮಾಡುತ್ತಿದ್ದ. ಯಾವುದೋ ವಿಷಯಕ್ಕೆ ಅವರ ನಡುವೆ ವಾಗ್ವಾದ ನಡೆದು ಕಬ್ಬಿಣದ ರಾಡ್‍ನಿಂದ ಹೊಡೆದು ವಿರೇಶನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆಯಾದ ವಿರೇಶ ರೌಡಿಶೀಟರ್ ಆಗಿದ್ದು, ಆತನ ಮೇಲೆ 2017ರಲ್ಲಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ 1 ಕೊಲೆ ಪ್ರಕರಣ, 2022ರಲ್ಲಿ ಚೌಕ್ ಪೊಲೀಸ್ ಠಾಣೆಯಲ್ಲಿ 1 ಕೊಲೆ ಮತ್ತು ಹಲ್ಲೆ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಡಿಸಿಪಿ ಕನಿಕಾ ಸಿಕ್ರಿವಾಲ್, ಸಬ್ ಅರ್ಬನ್ ಪೊಲೀಸ್ ಠಾಣೆಯ ಎಸಿಪಿ ಡಿ.ಜಿ.ರಾಜಣ್ಣ, ಪಿಐ ಮತ್ತು ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
