ಉದಯವಾಹಿನಿ,ಬೆಂಗಳೂರು : ಮಹಿಳೆಯರಿಗೆ 2,000 ರೂ. ಸಹಾಯಧನ ನೀಡುವ ಗೃಹಲಕ್ಷ್ಮೀ ಯೋಜನೆಗೆ ನಾಳೆಯಿಂದ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದುಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಲಕ್ಷ್ಮೀ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಸಬಹುದು. ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಗೃಹ ಲಕ್ಷ್ಮೀ ಯೋಜನೆಯಡಿ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನ ಇರುವುದಿಲ್ಲ, ಆಗಸ್ಟ್ 18 ರಂದು ಬೆಳಗಾವಿಯಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು. ಅನುಮಾನ ಇದ್ದರೆ ನೀವು 1902 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ಹೇಳಿದ್ದಾರೆ.
ನಾಳೆ ಮಧ್ಯಾಹ್ನ 1.30 ಕ್ಕೆ ಶಕ್ತಿ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಪತಿ ತೆರಿಗೆ ಕಟ್ಟಿದ್ರೆ, ಗಂಡ ತೆರಿಗೆ ಪಾವತಿದಾರರಾಗಿದ್ದರೆ ಅರ್ಜಿ ಸ್ವೀಕಾರ ಆಗಲ್ಲ. ಇ-ಗವರ್ನೆನ್ಸ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿರುವುದರಿಂದ ಅನರ್ಹವಾಗಿ ಯೋಜನೆ ಲಾಭ ಪಡೆಯುವವರ ಬಗ್ಗೆ ತಿಳಿಯಲಿದೆ ಎಂದು ತಿಳಿಸಿದ್ದಾರೆ.ಅರ್ಜಿ ನಮೂನೆಯನ್ನು ಕರ್ನಾಟಕ ಗ್ರಾಮ ಪಂಚಾಯಿತಿ ಕೇಂದ್ರ ಅಥವಾ ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಅರ್ಜಿ ಮತ್ತು ಪೂರಕ ದಸ್ತಾವೇಜನ್ನು ಅಧಿಕಾರಿಗಳು ಪರಿಶೀಲಿಸುತ್ತಾರೆ. ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ನಗದು ಪ್ರೋತ್ಸಾಹಕ ಮೊತ್ತವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತದೆ.
