ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಯಾರಾದರೂ ಯತ್ನಿಸಿದರೆ ಅಂಥವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಠಿಣ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಜೆಡಿಎಸ್‌ನ ಗೋವಿಂದರಾಜ ಅವರ ಪ್ರಶ್ನೆಗೆ ಉ್ತತರಿಸಿದ ಸಚಿವರು ಕಾನೂನು ಸುವ್ಯವಸ್ಥೆ ಹಾಳು ಮಾಡಲು ರಾಜ್ಯ ಸರ್ಕಾರ ಅವಕಾಶ ಕೊಡುವುದಿಲ್ಲ. ಒಂದು ವೇಳೆ ಕಾನೂನು ಕೈಗೆತ್ತಿಕೊಂಡರೆ ಅಂಥವರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಗುಡುಗಿದರು.
ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ರೌಡಿಗಳು, ಗೂಂಡಾಗಳು, ಸಮಾಜಘಾತುಕ ಶಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯಾರೂ ಕೂಡ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವಂತಿಲ್ಲ ಎಂದು ಹೇಳಿದರು.
ಚಾಕು, ಚೂರಿ, ಲಾಂಗು ಹಿಡಿದುಕೊಂಡು ಓಡಾಡುವವರ ಮೇಲೆ ತೀವ್ರ ನಿಗಾವಹಿಸಲಾಗಿದೆ. ನಾಗರಿಕರಿಗೆ ತೊಂದರೆ ಕೊಟ್ಟು ಶಾಂತಿ ಸುವ್ಯವಸ್ಥೆ ಕದಡಿದರೆ ನಾವು ನೋಡಿಕೊಂಡು ಸುಮೆನೆ ಇರಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ರಾಜಾಧಾನಿ ಬೆಂಗಳೂರು ಸೇರಿದಂತೆ ಇತರೆ ಕಡೆ ವೀಲಿಂಗ್ ನಡೆಸುವವರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಈ ರೀತಿ ಮಾಡಿದರೆ ಸೂಚನೆ ಕೊಡುತ್ತಾರೆ. ಆ ವೇಳೆ ಕಾನೂನು ಉಲ್ಲಂಘನೆ ಮಾಡಿದರೆ ನಿಯಮದ ಪ್ರಕಾರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
2023ರಲ್ಲಿ ವೀಲಿಂಗ್ ಚೇಸ್ ನಡೆಸಿ 223 ಪ್ರಕರಣ ದಾಖಲಾಗಿದ್ದವು, ಇದರಲ್ಲಿ 136 ಮಂದಿಯನ್ನು ಬಂಧಿಸಲಾಗಿತ್ತು. 2024 ರಲ್ಲಿ 126 ಪ್ರಕರಣಗಳು ದಾಖಲಾಗಿ, 179 ಮಂದಿಯನ್ನು ಬಂಧಿಸಿಲಾಗಿತ್ತು. 2025ರಲ್ಲಿ 47 ಪ್ರರಕರಣಗಳು ದಾಖಲಾಗಿ, 37 ಜನರನ್ನು ಬಂಧಿಸಲಾಗಿದೆ.
