ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ತಮ್ಮ ದಾಖಲೆಯ ಬಜೆಟ್‌ ಮಂಡನೆ ಮಾಡುತ್ತಿದ್ದು, ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಕಾಂಗ್ರೆಸ್‌‍ ಪ್ರಣಾಳಿಕೆಯ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುವುದು ಸೇರಿದಂತೆ ಮತ್ತಷ್ಟು ಜನಪರ ಯೋಜನೆಗಳನ್ನು ಸೇರ್ಪಡೆ ಮಾಡಲಿದ್ದಾರೆ.
ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ಕೊರತೆ ಇದೆ ಎಂಬ ಕಾರಣಕ್ಕೆ ಹಲವಾರು ಮಂದಿ ಶಾಸಕರು ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಈ ನಿಟ್ಟಿನಲ್ಲಿ ಬಹಳಷ್ಟು
ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಅದಕ್ಕೆ ತೆರೆ ಎಳೆಯಲು ಸಿದ್ದರಾಮಯ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲು ಮುಂದಾಗಿದ್ದಾರೆ.
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಶಿಕ್ಷಣ ಇಲಾಖೆಯಲ್ಲಿ ಕಟ್ಟಡಗಳ ನಿರ್ಮಾಣ, ತರಗತಿ ಕೊಠಡಿಗಳ ಸಂಖ್ಯೆ ಹೆಚ್ಚಳ, ಶಿಕ್ಷಕರ ನೇಮಕಾತಿ, ಆರೋಗ್ಯ ವಲಯದಲ್ಲಿ ಪ್ರಾಥಮಿಕ ಸೇವೆಯ ಬಲವರ್ಧನೆ, ಜಿಲ್ಲಾ ಕೇಂದ್ರಗಳಲ್ಲಿ ಸೂಪರ್‌ ಸ್ಪೆಷಾಲಿಟಿ ಸೌಲಭ್ಯ ಹೆಚ್ಚಳ, ಕೈಗಾರಿಕೆಗಳಿಗೆ ಹಲವಾರು ವಿಶೇಷ ವಲಯಗಳ ನಿರ್ಮಾಣ ಸೇರಿದಂತೆ ಹೊಸ ಯೋಜನೆಗಳನ್ನು ಘೋಷಣೆ ಮಾಡಲು ಮುಂದಾಗಿದ್ದಾರೆ.
ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಅನ್ಯಾಯದ ಬಗ್ಗೆಯೂ ಪ್ರಸ್ತಾಪಿಸಲಿರುವ ಸಿದ್ದರಾಮಯ್ಯ, ನ್ಯಾಯಯುತ ತೆರಿಗೆ ಪಾಲಿಗಾಗಿ ಮತ್ತಷ್ಟು ಒತ್ತಡ ಹೇರುವ ಪ್ರಯತ್ನ ಮಾಡಲಿದ್ದಾರೆ. ನೀರಾವರಿ ಯೋಜನೆಗಳ ಪೈಕಿ ಅದರಲ್ಲೂ ಮೇಕೆದಾಟು ಹಾಗೂ ಮಹದಾಯಿ ಯೋಜನೆಗಳ ಪ್ರಸ್ತಾಪ ಮಾಡಿ, ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆಯಲಿದ್ದಾರೆ.ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಬಳಿ ಅಣೆಕಟ್ಟು ನಿರ್ಮಾಣ ಮಾಡಿ ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರು ಪೂರೈಸಲು ಹಲವು ವರ್ಷಗಳಿಂದ ಬೇಡಿಕೆ ನೆನೆಗುದಿಗೆ ಬಿದ್ದಿದೆ. ಕೇಂದ್ರ ಸರ್ಕಾರ ಗೋವಾ ರಾಜ್ಯದ ಆಕ್ಷೇಪಕ್ಕೆ ಮಣೆ ಹಾಕಿ, ಪರಿಸರ ರಕ್ಷಣೆ ನೆಪದಲ್ಲಿ ನಿರಾಕ್ಷೇಪಾಣಾ ಪತ್ರ ನೀಡದೆ ವಿಳಂಬ ಮಾಡುತ್ತಿದೆ ಎಂಬ ಆರೋಪಗಳಿವೆ.
ಅದಕ್ಕಾಗಿ ಬಜೆಟ್‌ ನಲ್ಲಿ ಹಿಂದಿನ ಸರ್ಕಾರಗಳು ಕೂಡ ಕಳಸಾ ಬಂಡೂರಿ ಯೋಜನೆಯನ್ನು ಪ್ರಸ್ತಾಪಿಸಿದ್ದರೂ. ಸಿದ್ದರಾಮಯ್ಯ ಸರ್ಕಾರ ನಿರ್ಣಾಯಕ ಹೆಜ್ಜೆ ಇಡಲು ಮುಂದಾಗಿದೆ.ಹಳೆ ಮೈಸೂರು ಭಾಗದಲ್ಲಿ ಮೇಕೆದಾಟು ಯೋಜನೆ ಬಹುನಿರೀಕ್ಷೆ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!