ಉದಯವಾಹಿನಿ, ಕಡರನಾಯ್ಕನಹಳ್ಳಿ: ಎಕ್ಕೆಗೊಂದಿ ಗ್ರಾಮದಿಂದ ಭಾನುವಳ್ಳಿವರೆಗಿನ ಸಿಸಿ ರಸ್ತೆ ಕಾಮಗಾರಿ ಎರಡು ವರ್ಷಗಳಾದರೂ ಪೂರ್ಣವಾಗದ ಕಾರಣ ವಾಹನ ಸವಾರರು, ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ.ಹರಿಹರ-ಹೊನ್ನಾಳಿ ರಸ್ತೆಯ ಬಲಕ್ಕೆ ನಂದೀಶ್ವರ ಮಹಾದ್ವಾರವಿದೆ.
ಅಲ್ಲಿಂದ 3 ಕಿ.ಮೀ. ಸಿಸಿ ರಸ್ತೆ ಕಾಮಗಾರಿ ಪ್ರಾರಂಭಗೊಂಡು ಎರಡು ವರ್ಷಗಳಾಗಿವೆ. ಅವಧಿ ಮುಗಿದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಗ್ರಾಮದ ಗೋಣಗೆರೆ ಮಂಜಪ್ಪ ದೂರಿದ್ದಾರೆ. ಒಂದು ಕಡೆ ಮಾತ್ರ ಬಾಕ್ಸ್ ಚರಂಡಿ ನಿರ್ಮಿಸಿದ್ದು, ಅದು ಅವೈಜ್ಞಾನಿಕವಾಗಿದೆ. ಚರಂಡಿ ನೀರು ರಸ್ತೆ ಪಕ್ಕದ ಮನೆಗಳಿಗೆ ಬಸಿಯುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ರಸ್ತೆಯ ಇನ್ನೊಂದು ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಮಳೆಗಾಲದ ಸಂದರ್ಭದಲ್ಲಿ ಮಳೆ ನೀರು ಮನೆಗಳಿಗೆ ನುಗತ್ತದೆ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಬೇಕು. ಎಲ್ಲೆಲ್ಲಿ ಲೋಪವಾಗಿದೆ ಅದನ್ನು ಸರಿಪಡಿಸಬೇಕು ಎಂದು ಹರಿಹರ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಚ್.ಬಿ.ಕೊಟ್ರೇಶ್, ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಎನ್.ಪ್ರಕಾಶ್, ವೀರೇಶ್ ಬಾದಾಮಿ ಒತ್ತಾಯಿಸಿದರು.
ಎಕೈಗೊಂದಿ ಭಾನುವಳ್ಳಿ ಸಿಸಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದು ಕಾಮಗಾರಿ ಪೂರ್ಣಗೊಳಿಸದಿದ್ದರೆ ಪ್ರತಿಭಟನೆ
ಕೊಕ್ಕನೂರು-ಕಡರನಾಯ್ಕನಹಳ್ಳಿ ರಸ್ತೆ ಕಾಮಗಾರಿ ಎರಡು ವರ್ಷಗಳಿಂದ ಪ್ರಾರಂಭದಲ್ಲೇ ಇದೆ. ಡಾಂಬರೀಕರಣ ಮಾಡಲು ಇನ್ನೆಷ್ಟು ವರ್ಷಗಳು ಬೇಕಾಗುತ್ತದೆ ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ರಸ್ತೆಗೆ ಕಳಪೆ ಮಣ್ಣನ್ನು ಹಾಕಿರುವುದರಿಂದ ಮಳೆ ಬಂದಾಗ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಇಲಾಖೆಯ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರಾದ ವಿಜಯ್ ಗಂಟೀರ ಜಿ.ಟಿ. ಕಟ್ಟಿ ರಮೇಶ್ ಅಭಿನಂದನ್ ಪಾಟೀಲ್ ಎಚ್ಚರಿಸಿದ್ದಾರೆ.
