ಉದಯವಾಹಿನಿ, ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಕೇಳಿದಷ್ಟು ಹಣ ಕೊಡದಿದ್ದರೂ ಮುಖ್ಯಮಂತ್ರಿಗಳು ಅರ್ಧದಷ್ಟನ್ನಾದರೂ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಇದಕ್ಕೆ ರೈತ ಹೋರಾಟಗಾರರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಂಟುತ್ತಾ ಸಾಗುತ್ತಿರುವ ಭದ್ರಾ ಯೋಜನೆ ಕಾಮಗಾರಿಗೆ ರಾಜ್ಯ ಸರ್ಕಾರ * 5,000 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಮುಖಂಡರು ಒತ್ತಾಯಿಸಿದ್ದರು. ಹಕ್ಕೊತ್ತಾಯ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಅರ್ಪಿಸಿದ್ದರು. ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೇ ರಾಜ್ಯ ಸರ್ಕಾರ ಹೆಚ್ಚು, ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದರು.
ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು * 2,611 ಕೋಟಿ ಘೋಷಣೆ ಮಾಡಿದ್ದಾರೆ. ರೈತರು ಕೇಳಿದ್ದಕ್ಕೆ ಶೇ 52ರಷ್ಟು ಅನುದಾನ ಮಾತ್ರ ಸಿಕ್ಕಿದೆ. ಗ್ಯಾರಂಟಿ ಯೋಜನೆಗಳ ನಡುವೆಯೂ ಅಷ್ಟಾದರೂ ಅನುದಾನ ಘೋಷಣೆಯಾಯಿತಲ್ಲಾ ಎಂಬ ಸಮಾಧಾನದಲ್ಲಿ ರೈತ ಮುಖಂಡರಿದ್ದಾರೆ.
