ಉದಯವಾಹಿನಿ, ಬೆಂಗಳೂರು: ಬಿಬಿಎಂಪಿಯನ್ನು ಏಳು ಪಾಲಿಕೆಗಳನ್ನಾಗಿ ವಿಭಜಿಸುವ ಹಾಗೂ ಗ್ರೇಟರ್ ಬೆಂಗಳೂರು ಸಮಿತಿ ರಚಿಸುವ ವಿಧೇಯಕವನ್ನು ವಿಧಾನಸಭೆಯಲ್ಲಿಂದು ಮಂಡಿಸಲಾಯಿತು. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧೇಯಕವನ್ನು ಮಂಡಿಸಿ, ಕೆಂಪೆಗೌಡರು ಬೆಂಗಳೂರನ್ನು ಸ್ಥಾಪಿಸಿದರು. ಇಡೀ ವಿಶ್ವವೇ ಬೆಂಗಳೂರಿನತ್ತ ನೋಡುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಬೆಂಗಳೂರು ಬೆಳೆಯುತ್ತಿದೆ. ಆಡಳಿತಾತಕ ದೃಷ್ಟಿಯಿಂದ ವಿಭಜನೆ ಅನಿವಾರ್ಯ ಎಂದರು.
ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಬೆಂಗಳೂರು ನಗರಸಭೆ ಸದಸ್ಯರಾಗಿದ್ದರು. ರಾಜಕೀಯದಲ್ಲಿ ಪ್ರಮುಖ ಸ್ಥಾನಕ್ಕೇರಿದ ಹಲವಾರು ಮಂದಿ ಪಾಲಿಕೆ ಸದಸ್ಯರಾಗಿ, ಶಾಸಕರಾಗಿ, ಸಚಿವರು, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ ಎಂದರು.ಈ ಹಿಂದೆ ಎಸ್.ಎಂ.ಕೃಷ್ಣ ಅವರ ಕಾಲಾವಧಿಯಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರು ಚಿಕ್ಕದಿತ್ತು, ಈಗ ದೊಡ್ಡದಾಗಿ ಬೆಳೆದಿದ್ದೆ. ಅದಕ್ಕಾಗಿ ಗ್ರೇಟರ್ ಬೆಂಗಳೂರು ಕಾಯ್ದೆ ರೂಪಿಸಲಾಗಿತ್ತು. ಹಿಂದೆ ಇದೇ ಸದನದಲ್ಲಿ ಕಾಯ್ದೆಯನ್ನು ಮಂಡಿಸಿದಾಗ ವಿಸ್ತೃತ ಚರ್ಚೆಯಾಗಬೇಕು ಎಂದು ವಿರೋಧ ಪಕ್ಷದ ನಾಯಕರು ಸಲಹೆ ನೀಡಿದ್ದರು. ಅದಕ್ಕಾಗಿ ಜಂಟಿ ಸದನ ಸಮಿತಿ ರಚನೆ ಮಾಡಲಾಗಿತ್ತು. ವರದಿ ಪಡೆದು ಮಸೂದೆಗೆ ತಿದ್ದುಪಡಿ ತರಲಾಗಿದೆ ಎಂದರು. ಹಿಂದೆ ಬೇರೆ ಬೇರೆ ಕಾಲದಲ್ಲಿ ನಡೆದ ವಿಸ್ತರಣೆಯನ್ನು ವಿವರಿಸಿದ ಅವರು, ಸ್ಥಳೀಯ ಸಂಸ್ಥೆಗಳ ಆಡಳಿತ ಬಲವರ್ಧನೆ ಮಾಡುವ ಸಂವಿಧಾನ ಆಶಯಕ್ಕೆ ನಮ ಸರ್ಕಾರ ಬದ್ಧವಾಗಿದೆ. ಬೆಂಗಳೂರಿನ ಜನಸಂಖ್ಯೆ ಒಂದುವರೆ ಕೋಟಿಯಷ್ಟಿದೆ, ಐದು ಲಕ್ಷ ವಾಹನಗಳು ನೋಂದಣಿಯಾಗಿ ಸಂಚರಿಸುತ್ತಿವೆ.
ಬಿಜೆಪಿ ಸರ್ಕಾರದಲ್ಲಿ ಹಲವಾರು ಸಮಿತಿಗಳ ಮೂಲಕ ಬೆಂಗಳೂರು ಪುನರ್ ರಚನೆಯ ಅಧ್ಯಯನ ನಡೆಸಲಾಗಿದೆ. ನಮ ಸರ್ಕಾರ 2023ರಲ್ಲಿ ಬ್ರಾಂಡ್ ಬೆಂಗಳೂರು ಸಮಿತಿ ರಚನೆ ಮಾಡಲಾಗಿದೆ. ಬೆಂಗಳೂರು ಎಲ್ಲರಿಗೆ ಸೇರಿದೆ. ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ವಲಸೆ ಬರುವುದು ಹೆಚ್ಚಾಗುತ್ತಿದೆ. ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ನಗರೀಕರಣ ಹೆಚ್ಚುತ್ತಿದೆ ಎಂದರು.
ಸದನ ಸಮಿತಿ 15ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದೆ. ಎಲ್ಲ ಪಕ್ಷಗಳ ಸದಸ್ಯರು ಸಮಿತಿಯಲ್ಲಿರು. ತಜ್ಞರ ಸಲಹೆ, ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ವರದಿ ಮಂಡನೆಯಾಗಿದೆ. ಅದರಲ್ಲಿ ದೋಷವಿದ್ದರೇ ಈಗಲೂ ಅದನ್ನು ಪರಿಶೀಲನೆ ಮಾಡಲು ನಾನು ಬದ್ಧ ಎಂದರು.
