ಉದಯವಾಹಿನಿ, ಬೆಂಗಳೂರು: ಬೇಲೂರಿನಲ್ಲಿ ಖಾಸಗಿ ವಾಣಿಜ್ಯ ಮಳಿಗೆಯ ಸಜ್ಜಾ ಕುಸಿದು ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿರುವ ಪ್ರಕರಣ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿತು. ಶೂನ್ಯ ವೇಳೆಯಲ್ಲಿ ಬೇಲೂರು ಕ್ಷೇತ್ರದ ಎಚ್‌.ಕೆ.ಸುರೇಶ್‌ ಅವರು ತಮ ಕ್ಷೇತ್ರದ ಪುರಸಭೆಯ ವ್ಯಾಪ್ತಿಯಲ್ಲಿರುವ ಬಸ್‌‍ನಿಲ್ದಾಣದಲ್ಲಿನ ಹಳೆಯ ಖಾಸಗಿ ವಾಣಿಜ್ಯ ಮಳಿಗೆ ಕುಸಿದು ಇಬ್ಬರು ಮೃತಪಟ್ಟು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಹಲವು ಮಂದಿ ಗಾಯಗೊಂಡಿದ್ದಾರೆ. ವಾಣಿಜ್ಯ ಮಳಿಗೆ ದುಸ್ಥಿತಿಯಲ್ಲಿರುವ ಬಗ್ಗೆ ಹಲವು ಬಾರಿ ಸೂಚನೆ ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿಲ್ಲ. ಇದು ನಮ ಜಿಲ್ಲಾಡಳಿತದ ಅವ್ಯವಸ್ಥೆ ಎಂದರು.
ಮೃತಪಟ್ಟವರಲ್ಲಿ ಮುಸಲಾನ ಕುಟುಂಬವೂ ಸೇರಿದೆ ಎಂದು ಎಚ್‌.ಕೆ.ಸುರೇಶ್‌ ಹೇಳುತ್ತಿದ್ದಂತೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಮಧ್ಯ ಪ್ರವೇಶ ಮಾಡಿ ಘಟನೆಯಲ್ಲಿ ಇಬ್ಬರು ಮೃತಪಟ್ಟು ನಾಲ್ಕೈದು ಮಂದಿ ಮೃತಪಟ್ಟಿದ್ದಾರೆ. ಅದು ಮಾರುಕಟ್ಟೆಯ ಪ್ರದೇಶ.  ಹಳೆಯ ಕಟ್ಟಡಗಳಿದ್ದರೆ ಅದನ್ನು ನಗರಸಭೆ ಪರಿಶೀಲನೆ ನಡೆಸಿ ನೋಟೀಸ್‌‍ ಕೊಟ್ಟು ತೆರವು ಮಾಡಿಸಬೇಕಿತ್ತು. ಇಲ್ಲಿ ನಿರ್ಲಕ್ಷ್ಯತೆ ಕಂಡುಬಂದಿದೆ. ದುರ್ಘಟನೆಯಾದ ಬಳಿಕವೂ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಜೀರ್‌ ಪಾಷ, ಜ್ಯೋತಿ ಎಂಬುವರು ಮೃತಪಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಎಲ್ಲಾ ಸಮುದಾಯದವರೂ ಇರುತ್ತಾರೆ. ಸರ್ಕಾರ ಈ ಮಟ್ಟಿಗಿನ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದರು. ಗೃಹಸಚಿವ ಡಾ.ಜಿ.ಪರಮೇಶ್ವರ್‌ ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಹೇಳಿದರು. ಬಿಜೆಪಿಯ ಸಿ.ಸಿ.ಪಾಟೀಲ್‌, ಗೃಹಸಚಿವರೇ ಘಟನೆ ಬಗ್ಗೆ ಉತ್ತರ ಕೊಡಲಿ ಎಂದಾಗ ಸಭಾಧ್ಯಕ್ಷರು ಸಲಹೆ ಕೊಡುವ ಚಾಣಾಕ್ಷರು ತುಂಬಾ ಜನ ಇದ್ದಾರೆ. ಇದು ಶೂನ್ಯ ವೇಳೆ. ಸಚಿವರು ನಾಳೆ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.
ಎಚ್‌.ಕೆ.ಸುರೇಶ್‌ ಉಪ್ಪಾರ ಸಮುದಾಯದ ವ್ಯಕ್ತಿಯೊಬ್ಬ ಗಾಯಗೊಂಡಿದ್ದಾರೆ. ಈಡಿಗ ಸಮುದಾಯದ ಜ್ಯೋತಿ ಹಾಗೂ ಪರಿಶಿಷ್ಟ ಜಾತಿಯ ನೀಲಮ ಕೂಡ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಐವರಲ್ಲಿ ಒಬ್ಬರು ಮಾತ್ರ ಅಪಾಯದಿಂದ ಪಾರಾಗಿದ್ದಾರೆ. ಉಳಿದವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ 50 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!