ಉದಯವಾಹಿನಿ, ಹಾಸನ: ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ‘ಮಾದಕ ವಸ್ತು ಮುಕ್ತ ಕರ್ನಾಟಕ’, ‘ಎಲ್ಲರಿಗೂ ಆರೋಗ್ಯ’ ಎಂಬ ಶೀರ್ಷಿಕೆಯಡಿ ಹಮ್ಮಿಕೊಳ್ಳಲಾಗಿದ್ದ ‘ಪೊಲೀಸ್ ರನ್ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಸುಮಾರು 5ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ನಗರದ ಸರ್ಕಾರಿ ಎಂಜಿನಿಯರ್ ಕಾಲೇಜು ಬಳಿಯಿಂದ 5 ಕಿ.ಮೀ. ಓಟದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ, ವೈದ್ಯರು, ವಿವಿಧ ಸಂಘ- ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಮಾದಕ ವಸ್ತು ಮುಕ್ತ ಕರ್ನಾಟಕ, ಸೈಬರ್ ಅಪರಾಧಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾರಥಾನ್ ಆಯೋಜಿಸಲಾಗಿತ್ತು.ಇದರಲ್ಲಿ ಸುಮಾರು 20 ಶಾಲಾ- ಕಾಲೇಜು ವಿದ್ಯಾರ್ಥಿಗಳು, ಬ್ಯಾಂಕ್ ಸಿಬ್ಬಂದಿ, ಕೆಎಸ್‌ಆರ್‌ಪಿ ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸರು, ವೈದ್ಯಕೀಯ, ನರ್ಸಿಂಗ್ ಕಾಲೇಜು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 5ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು ಎಂದರು.
5ಕಿ.ಮೀ. ಓಟದ ಮ್ಯಾರಥಾನ್‌ಗೆ ನೋಂದಾಯಿಸಿದ್ದ ಸದಸ್ಯರು ಓಟವನ್ನು ಪೂರ್ಣಗೊಳಿಸಿದರು. ಪ್ರಮುಖವಾಗಿ ಜನರ ಪಾಲ್ಗೊಳ್ಳುವಿಕೆ ಹಾಗೂ ಅವರಲ್ಲಿ ಸೈಬರ್ ಅಪರಾಧ ಹಾಗೂ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು ಎಂದರು. ಪೊಲೀಸ್ ರನ್ ಮ್ಯಾರಥಾನ್ ಕುರಿತು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಭಿತ್ತಿ ಪತ್ರದ ಮೂಲಕ ಪ್ರಚಾರ ನೀಡಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಒಟದಲ್ಲಿ ಭಾಗವಹಿಸಿದ್ದ ಹಲವರಿಗೆ ಬಹುಮಾನ ವಿತರಿಸಲಾಯಿತು. ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು. ಪ್ರೊಬೇಷನರಿ ಐಪಿಎಸ್ ಅಧಿಕಾರಿ ಶಾಲು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಕೆ.ತಮ್ಮಯ್ಯ, ವೆಂಕಟೇಶ ನಾಯ್ತು. ಡಿವೈಎಸ್ಪಿ ಪ್ರಮೋದ್ ಕುಮಾರ್, ಸಶಸ್ತ್ರ ಮೀಸಲು ಪಡೆಯ ಪಾಲಾಕ್ಷ. ನಗರ ಪೊಲೀಸ್ ಠಾಣೆ ಮೋಹನ್ ಕೃಷ್ಣ, ಡಿಸಿಎಫ್ ಸೌರಭ್ ಕುಮಾರ್, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಬ್ಯಾಂಕ್ ನೌಕರರು, ಸಂಘ-ಸಂಸ್ಥೆ ಮುಖ್ಯಸ್ಥರು, ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.
