ಉದಯವಾಹಿನಿ, ಬೆಂಗಳೂರು: ರಾಜ್ಯ ದಲ್ಲಿ ಕಳೆದ 30 ವರ್ಷಗಳಲ್ಲಿ ಯಾವ ಪಕ್ಷದ ಸರ್ಕಾರವೂ ಪುನರಾವರ್ತಿತವಾಗಿಲ್ಲ. ಈಗಿರುವ ರಾಜ್ಯದ ಮುಖ್ಯಮಂತ್ರಿ ಯಾವಾಗ ಹೋಗುತ್ತಾರೋ, ಹೊಸ ಮುಖ್ಯಮಂತ್ರಿ ಯಾವಾಗ ಬರುತ್ತಾರೋ ಗೊತ್ತಿಲ್ಲ ಎಂದು ವಿರೋಧಪಕ್ಷದ ನಾಯಕ ಆರ್‌.ಅಶೋಕ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಅಧಿಕಾರ ನಡೆಸುತ್ತಿದ್ದ ಪಕ್ಷದವರೆಲ್ಲರೂ ಮುಂದೆ ನಾವೇ ಬರುತ್ತೇವೆ ಎಂದು ಹೇಳುತ್ತಿದ್ದರು. ಆದರೆ ಯಾವ ಪಕ್ಷವೂ ಅಧಿಕಾರಕ್ಕೆ ಬಂದಿಲ್ಲ. ಮೂರು ವರ್ಷದ ನಂತರ ನೀವು(ಕಾಂಗ್ರೆಸ್‌‍) ಇರುವುದಿಲ್ಲ ಎಂದು ಛೇಡಿಸಿದರು.
ಕಾಂಗ್ರೆಸ್‌‍ ಪಕ್ಷದ ಗ್ಯಾರಂಟಿಯಾದರೂ ಜನರಿಗೆ ತಲುಪಿಸುವ ಜವಾಬ್ದಾರಿ ಶಾಸಕರ ಮೇಲಿರುತ್ತದೆ. ತಾಲ್ಲೂಕಿಗೆ ಶಾಸಕರು, ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯಕ್ಕೆ ಮುಖ್ಯಮಂತ್ರಿಗಳು, ಈ ಸದನಕ್ಕೆ ಸಭಾಧ್ಯಕ್ಷರೇ ಸುಪ್ರೀಂ. ಹೀಗಾಗಿ ಗ್ಯಾರಂಟಿ ಸಮಿತಿಗಳಿಗೆ ಶಾಸಕರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಯಾವ ಕಾಂಗ್ರೆಸ್‌‍ ಅಧ್ಯಕ್ಷರೂ ಮಾಡದ ಮನೆಹಾಳು ಕೆಲಸವನ್ನು ಈಗ ಮಾಡಲಾಗಿದೆ ಎಂದು ಹೇಳಿದಾಗ ಆಡಳಿತ ಪಕ್ಷದ ಶಾಸಕ ನರೇಂದ್ರಸ್ವಾಮಿ ಆಕ್ರೋಶ ವ್ಯಕ್ತಪಡಿಸಿ, ವಿರೋಧಪಕ್ಷದ ನಾಯಕರು ಕ್ಷಮೆ ಕೇಳಬೇಕು, ಕಡತದಿಂದ ಆ ಶಬ್ದವನ್ನು ತೆಗೆಯಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!