ಉದಯವಾಹಿನಿ, ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಕನ್ನಡದ ಚಿತ್ರನಟಿ ರನ್ಯಾರಾವ್ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್‌ಗೆ ಏಕಕಾಲದಲ್ಲಿ ಎರಡೆರಡು ಕಾನೂನಿನ ಸಂಕಷ್ಟಗಳು ಎದುರಾಗಿದೆ.
ಪ್ರಕರಣ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಚಿನ್ನ ಕಳ್ಳ ಸಾಗಾಣಿಕೆಯ ಪ್ರಮುಖ ರೂವಾರಿ ಹಾಗೂ ಪ್ರಸ್ತುತ ಡಿಆರ್‌ಐ ವಶದಲ್ಲಿರುವ ರನ್ಯಾರಾವ್ ಅವರ ಪ್ರಕರಣದಲ್ಲಿ ಹಾಲಿ ಡಿಜಿಪಿ ರಾಮಚಂದ್ರರಾವ್ ಅವರ ಪಾತ್ರದ ಕುರಿತು ತನಿಖೆಗೆ ಆದೇಶ ನೀಡಿದೆ.
ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಪೊಲೀಸ್ ಸಿಬ್ಬಂದಿಗಳ ಕರ್ತವ್ಯಲೋಪ ಎಸಗಿರಬಹುದಾದ ಸಂಭಾವ್ಯದ ಕುರಿತು ಸರ್ಕಾರ ಸಿಐಡಿ ತನಿಖೆಗೆ ಆದೇಶ ಕೊಟ್ಟಿದೆ. ಈ ಎರಡು ಬೆಳವಣಿಗೆಗಳು ರಾಮಚಂದ್ರರಾವ್ ಅವರಿಗೆ ಭಾರೀ ಕಾನೂನಿನ ಸಂಕಷ್ಟವನ್ನು ತಂದೊಡ್ಡಿದೆ.
ದುಬೈನಿಂದ ಬೆಂಗಳೂರಿಗೆ ಬರುವ ವೇಳೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ ರನ್ಯಾರಾವ್ ಅವರಿಗೆ ನೀಡಿದ್ದ ಶಿಷ್ಟಾಚಾರ ನಿಯಮ ಉಲ್ಲಂಘನೆ ಕುರಿತು ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವಗುಪ್ತ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿರುವ ರಾಜ್ಯ ಸರ್ಕಾರ ಒಂದು ವಾರದೊಳಗೆ ವರದಿ ನೀಡಬೇಕೆಂದು ಸೂಚನೆ ನೀಡಿದೆ.ತನಿಖೆಗೆ ಅಗತ್ಯವಿರುವ ದಾಖಲೆಗಳು ಹಾಗೂ ಎಲ್ಲಾ ರೀತಿಯ ನೆರವುಗಳನ್ನು ತನಿಖಾಧಿಕಾರಿಗಳಿಗೆ ನೀಡಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಕಾರಿಗಳಿಗೂ ಸೂಚನೆ ಕೊಡಲಾಗಿದೆ. ಆಡಳಿತ ಮತ್ತು ಸಿಬ್ಬಂದಿ ಸುಧಾರಣೆಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗಪ್ಪ.ಎಸ್ ಪರೀಟ್ ಅಧಿಸೂಚನೆ ಹೊರಡಿಸಿದ್ದು, ಒಂದು ವಾರದೊಳಗೆ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಸೂಚನೆ ಕೊಟ್ಟಿದ್ದಾರೆ.
