ಉದಯವಾಹಿನಿ, ಚಿಕ್ಕಮಗಳೂರು: ಆನೆ ಮತ್ತು ಮಾನವ ನಡುವಿನ ಸಂಘರ್ಷ ಕಡಿಮೆ ಮಾಡಲು ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ಸಾಫ್ಟ್ ರಿಲೀಸ್ ಕೇಂದ್ರ ಸ್ಥಾಪಿಸಲು ಅರಣ್ಯ ಇಲಾಖೆ ಮುಂದಾಗಿದೆ. ಯೋಜನೆ ಅನುಷ್ಠಾನಕ್ಕೆ ಸಿದ್ಧತೆಗಳು ಆರಂಭವಾಗಿವೆ.
ಜನ ವಸತಿ ಪ್ರದೇಶದಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಹಿಡಿದು ಅರಣ್ಯಕ್ಕೆ ಈಗಾಗಲೇ ಬಿಡಲಾಗುತ್ತಿದೆ. ಆದರೆ, ಅವು ಆ ಜಾಗಕ್ಕೆ ಹೊಂದಿಕೊಳ್ಳದೆ ಮರಳಿ ಅದೇ ಜಾಗಕ್ಕೆ ತಲುಪುತ್ತಿರುವ ಸಾಕಷ್ಟು ಉದಾಹರಣೆಗಳಿವೆ. ಆದ್ದರಿಂದ ಹೊಸ ಜಾಗಕ್ಕೆ ಹೊಂದಿಸಿ ನಂತರ ಬಿಡುಗಡೆ ಮಾಡುವ ವಿಧಾನವನ್ನು ‘ಸಾಫ್ಟ್ ರಿಲೀಸ್ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಮಧ್ಯ ಪ್ರದೇಶದಲ್ಲಿ ಕಾಡುಕೋಣಗಳನ್ನು ಈ ರೀತಿ ಸಾಫ್ಟ್ ರಿಲೀಸ್ ಕೇಂದ್ರಗಳಲ್ಲಿ ಕೆಲ ದಿನಗಳ ಕಾಲ ಇರಿಸಿ ಆ ಪರಿಸರಕ್ಕೆ ಹೊಂದಿಕೆಯಾದ ನಂತರ ಬಿಡುಗಡೆ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಇದೇ ಪದ್ಧತಿಯನ್ನು ಆನೆಗಳಿಗೆ ಅಳವಡಿಕೆ ಮಾಡಲು ಯೋಜನೆ ರೂಪಿಸಿದೆ. ಆನೆಗಳನ್ನು ಪರಿಸರಕ್ಕೆ ಹೊಂದಿಸಿ ನಂತರ ಕಾಡಿಗೆ ಬಿಡುವ ಪದ್ಮತಿ ಹೊಸ ಪ್ರಯೋಗ ಎಂದು ಅಧಿಕಾರಿಗಳು ಹೇಳುತ್ತಾರೆ.
