ಉದಯವಾಹಿನಿ, ದಾವಣಗೆರೆ: ಹಕ್ಕಿ ಜ್ವರದ ಭೀತಿಯಿಂದಾಗಿ ಬಿಸಿಯೂಟ ಯೋಜನೆಯಡಿ ನೀಡುವ ಮೊಟ್ಟೆಯನ್ನು ಸೇವಿಸಲು ಜಿಲ್ಲೆಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕೆಲವು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲ. ವಿದ್ಯಾರ್ಥಿಗಳ ಮನವೊಲಿಸಿ ಮೊಟ್ಟೆ ವಿತರಿಸಲು ಶಿಕ್ಷಕರು ಕಷ್ಟಪಡುತ್ತಿದ್ದಾರೆ. ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ ವರೆಗೆ ವಾರದ 6 ದಿನವೂ ಮೊಟ್ಟೆ ನೀಡಲಾಗುತ್ತಿದೆ. ಚಿಕ್ಕಬಳ್ಳಾಪುರ, ರಾಯಚೂರು ಮತ್ತು ಬಳ್ಳಾರಿಯಲ್ಲಿ ಹಕ್ಕಿಜ್ವರಕ್ಕೆ ಕೋಳಿಗಳು ಬಲಿಯಾದ ಬಳಿಕ ರೋಗದ ಭೀತಿ ಮಧ್ಯ ಕರ್ನಾಟಕದಲ್ಲೂ ಆವರಿಸಿದೆ. ‘ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಯಿಂದ ಹಕ್ಕಿ ಜ್ವರ ಹರಡುತ್ತದೆ’ ಎಂಬ ಭಾವನೆ ಕೆಲ ಪಾಲಕರು ಮತ್ತು ವಿದ್ಯಾರ್ಥಿಗಳಲ್ಲಿದೆ. ಈ ತಪ್ಪುಗ್ರಹಿಕೆ ನಿವಾರಿಸಿ ಮೊಟ್ಟೆ ವಿತರಿಸುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಮೊಟ್ಟೆಯನ್ನು ಸರಿಯಾಗಿ ಬೇಯಿಸಿ ವಿತರಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಬಿಸಿಯೂಟದ ಇತರ ಪದಾರ್ಥಗಳಿಂದ ಮೊಟ್ಟೆಯನ್ನು ದೂರ ಇಡುವಂತೆಯೂ ನಿರ್ದೇಶಿಸಲಾಗಿದೆ. ‘ಮೊಟ್ಟೆ ಸೇವನೆ ಕಡ್ಡಾಯವಲ್ಲ. ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ನೀಡಲಾಗುತ್ತದೆ. ನಿತ್ಯ ಬೆಳಿಗ್ಗೆ ತರಗತಿ ಆರಂಭವಾದಾಗ ಅಕ್ಷರ ದಾಸೋಹ ಸಿಬ್ಬಂದಿ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸುತ್ತಾರೆ. ಮೊಟ್ಟೆ ಮತ್ತು ಬಾಳೆಹಣ್ಣು ಎಷ್ಟು ಬೇಕಾಗುತ್ತದೆ ಎಂಬ ಲೆಕ್ಕಹಾಕುತ್ತಾರೆ. ಇತ್ತೀಚಿನ ಕೆಲ ದಿನಗಳಿಂದ ಮೊಟ್ಟೆ ತಿರಸ್ಕರಿಸುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ 5ರಿಂದ ಶೇ 10ರಷ್ಟು ಏರಿಕೆ ಕಂಡಿದೆ’ ಎಂಬುದು ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರ ಅಭಿಪ್ರಾಯ.
