ಉದಯವಾಹಿನಿ, ಹಾವೇರಿ: ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವವನ್ನು ಜಿಲ್ಲೆಯಾದ್ಯಂತ ಬುಧವಾರ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾ ಕೇಂದ್ರ ಹಾವೇರಿ ಹಾಗೂ ಪ್ರತಿ ತಾಲ್ಲೂಕಿನಲ್ಲಿ ಕಾರ್ಯಕ್ರಮಗಳು ನಡೆದವು. ಕೆಲ ಗ್ರಾಮಗಳಲ್ಲಿಯೂ ಜನರು ಜಗದ್ಗುರು ರೇಣುಕಾಚಾರ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಹಾವೇರಿಯ ಜಗದ್ಗುರು ರೇಣುಕಾ ಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಹಶೀಲ್ದಾರ್ ಶರಣಮ್ಮ, ‘ಜಗದ್ಗುರು ರೇಣುಕಾಚಾರ್ಯರ ತತ್ತ್ವ ದರ್ಶನಗಳು ಎಲ್ಲರಿಗೂ ದಾರಿದೀಪವಾಗಿವೆ. ಮಾನವನ ಜನ್ಮ ಎಲ್ಲಾ ಜೀವರಾಶಿಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು, ೧೨ನೇ ಶತಮಾನದಲ್ಲಿ ಸಮಾಜ ಸುಧಾರಕರಾದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಮುಂತಾದ ಶರಣರು ಸಮಾಜಕ್ಕೆ ತನ್ನದೆಯಾದ ಕೊಡುಗೆ ನೀಡಿದ್ದಾರೆ ಎಂದು ತಾಲೂಕು ದಂಡಾಧಿಕಾರಿ ಕೆ. ಶರಣಮ್ಮ ಹೇಳಿದರು.
‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಧೈಯವಾಕ್ಯದೊಂದಿಗೆ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸುತ್ತಿದ್ದೇವೆ. ಆದರೆ, ಇಂದಿನ ಆಧುನಿಕ ಯುಗದಲ್ಲಿ ಜಾತಿಯೆಂಬುದು ಪಿಡುಗಾಗಿ ಬೆಳೆದಿದೆ. ಇಂತಹ ಜಾತಿ ಸಂಕೋಲೆಯಿಂದ ಹೊರಬಂದು, ನಾವೆಲ್ಲರೂ ಒಗ್ಗಟಾಗಿ ಜೀವಿಸಬೇಕಾಗಿದೆ ಎಂದರು.
ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿ ಗೌಡ್ರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ರೇಣುಕಾಚಾರ್ಯ ಸೇವಾ ಸಮಿತಿಯ ಅಧ್ಯಕ್ಷ ಕುಮಾರ್ ಸಾತೇನಹಳ್ಳಿ ಇದ್ದರು.
