ಉದಯವಾಹಿನಿ, ಬೆಂಗಳೂರು: ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಅಭಿವೃದ್ಧಿಯ ಅಂಶಗಳೇ ಇಲ್ಲ ಶಾಸಕರೇ ಅಭಿವೃದ್ಧಿಗೆ ಹಣ ಇಲ್ಲ. ವಿಧಾನಸಭೆಯಲ್ಲಿ ನೇಣು ಹಾಕಿಕೊಳ್ಳಬೇಕಾಗುತ್ತದೆ ಎಂಬ ಮಟ್ಟದಲ್ಲಿ ಚರ್ಚೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ವಿರೋಧಪಕ್ಷದ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು, ಆಶಾ ಕಾರ್ಯಕರ್ತರು, ಬಿಸಿಯೂಟ ಮತ್ತು ಅಂಗನವಾಡಿಯ ಸಿಬ್ಬಂದಿಗಳಿಗೆ ಸರಿಯಾಗಿ ಗೌರವ ಧನ ನೀಡುತ್ತಿಲ್ಲ, ಆತಿಥಿ ಉಪನ್ಯಾಸಕರಿಗೆ 6 ತಿಂಗಳಿನಿಂದಲೂ ವೇತನ ಕೊಟ್ಟಿಲ್ಲ. ಚನ್ನಗಿರಿಯ ಶಾಸಕರು ಅಭಿವೃದ್ಧಿಗೆ ಹಣ ಇಲ್ಲ, ವಿಷ ಕುಡಿಯುವ ಪರಿಸ್ಥಿತಿ ಬಂದಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್‌ನ ಮತ್ತೊಬ್ಬ ಶಾಸಕ ರಾಜು ಕಾಗೆ ಅಭಿವೃದ್ಧಿಗೆ ಹಣ ಇಲ್ಲದೇ ಇರುವುದರಿಂದ ವಿಧಾನಸಭೆಯಲ್ಲಿಯೇ ನೇಣು ಹಾಕಿಕೊಳ್ಳುವಂತಾಗಿದೆ ಎಂದಿದ್ದಾರೆ. ಈ ಸರ್ಕಾರ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ತರಾಟೆಗೆ ತೆಗೆದುಕೊಂಡರು. ಧಾನಸಭೆಯಲ್ಲಿ ನೇಣು ಹಾಕಿಕೊಳ್ಳಲು ಅನುಮತಿ ಕೊಡಬೇಕಾ ಎಂದು ಹಾಸ್ಯ ಚಟಾಕಿ ಹಾರಿದರು.
ಸಿದ್ದರಾಮಯ್ಯನವರ ಸರ್ಕಾರ ಸಾಲ ಮಾಡಿದ್ದನ್ನು ಬಿಟ್ಟರೆ ಬೇರೆ ಯಾವ ಸಾಧನೆಯನ್ನೂ ಮಾಡಿಲ್ಲ. ಗಂಟಲು ಒಣಗಿದೆ, ತಗೋ ಚಿನ್ನದ ಸರಪಳಿ, ಒಂದು ಗುಟುಕು ನೀರು ಕೊಡು ಎಂಬ ಕವನವನ್ನು ಸಿದ್ದರಾಮಯ್ಯನವರೇ ಬಜೆಟ್‌ನಲ್ಲಿ ಹೇಳಿಕೊಂಡಿದ್ದಾರೆ. ಈ ಸರ್ಕಾರ ಜನರ ಶ್ರೇಯೋಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರೊಬ್ಬರೇ ಮುಖ್ಯಮಂತ್ರಿಯಾಗಿ 4.91 ಲಕ್ಷ ಕೋಟಿ ರೂ. ಸಾಲಮಾಡಿದ್ದಾರೆ. ಒಟ್ಟು ಸಾಲದಲ್ಲಿ ಶೇ.63 ರಷ್ಟು ಸಿದ್ದರಾಮಯ್ಯನವರು ಮಾಡಿರುವ ಸಾಲದ ಪಾಲಿದೆ.
ಬಜೆಟ್ ಭಾಷಣದಲ್ಲಿ ತೆರಿಗೆಗಳನ್ನು ತೋರಿಸುವುದಿಲ್ಲ. ಭರಪೂರ ಹಣ ಎಂದು ತೋರಿಸಿದ್ದಾರೆ ಎಂದರು. ಕಳೆದ ವರ್ಷ ಜನರ ಮೇಲೆ ಗೂಬೆ ಕೂರಿಸಿ ಆಲೋಹಾಲ್, ಹಾಲು, ಪೆಟ್ರೋಲ್, ಮುದ್ರಾಂಕ ಶುಲ್ಕ ಹೆಚ್ಚಿಸಿದರು. 2025 ರಲ್ಲೂ ನಾಡಿನ ಜನರಿಗೆ ಕಾದಿದೆ ಮಾರಿಹಬ್ಬ, ಪ್ರತಿ ತಿಂಗಳು ಪರೋಕ್ಷವಾಗಿ ತೆರಿಗೆ ಹೆಚ್ಚಿಸುವ ಪರಿಸ್ಥಿತಿಗೆ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
