ಉದಯವಾಹಿನಿ , ಮಂಗಳೂರು: ‘ದೇವರ ಕೆರೆ’ ಎಂದೇ ಕರೆಯುವ ಕಾವೂರು ಕೆರೆಯನ್ನು ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ₹ 8.2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಎರಡು ವರ್ಷ ಹಿಂದೆಯೇ ಈ ಕಾಮಗಾರಿ ಮುಗಿದಿದೆ. ಆದರೆ, ಶೌಚಯುಕ್ತ ನೀರಿನ ‘ಸಂಗಮ’ದಿಂದ ಕೆರೆ ಮಲಿನವಾಗುವ ಸಮಸ್ಯೆ ಈಗಲೂ ಮುಂದುವರಿದಿದೆ.ಈ ಕೆರೆಗೆ ಚರಂಡಿಗಳಲ್ಲಿ ಹರಿದು ಬರುವ ಶೌಚಯುಕ್ತ ನೀರು ಸೇರಬಾರದು. ‘ದೇವರ ಕೆರೆ’ ಪವಿತ್ರವಾಗಿಯೇ ಉಳಿಯಬೇಕೆಂಬುದು ಸ್ಥಳೀಯರ ಒತ್ತಾಸೆಯಾಗಿತ್ತು. ಕೆರೆ ಒಡಲಿನಲ್ಲಿ ಹುಲುಸಾಗಿ ಬೆಳೆದ ಕಳ ಸಸ್ಯಗಳು, ವಾಯುವಿಹಾರಿಗಳ ಮೂಗಿಗೆ ಬಡಿಯುವ ದುರ್ನಾತ. ಕರೆಯಂಚಿನಲ್ಲಿ ನಿರ್ಮಿಸಿದ ನಾಲೆಯಲ್ಲಿ ರಾಶಿಬಿದ್ಧಿರುವ ಪ್ಲಾಸ್ಟಿಕ್ ಮತ್ತಿತರ ಕಸ… ಈ ಕೆರೆಯ ‘ಅಭಿವೃದ್ಧಿ’ಗೆ ಕನ್ನಡಿ ಹಿಡಿಯುತ್ತವೆ ಕೆರೆಗೆ ಐದು ಕಡೆಗೆ ನೀರು ಒಳಹರಿವಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಉತ್ತರ ದಿಕ್ಕಿನಲ್ಲಿ ಕೆರೆ ನೀರು ಹೊರಗೆ ಹರಿದು ಹೋಗಲು ತೂಬಿನ ವ್ಯವಸ್ಥೆ ಇದೆ.ದಕ್ಷಿಣದಿಂದ ಉತ್ತರ ದಿಕ್ಕಿನವರೆಗೆ ಕೆರೆಯಂಚಿನಲ್ಲಿ ಕಲುಷಿತ ನೀರು ಕೆರೆ ಸೇರದಿರಲೆಂದೇ ಪ್ರತ್ಯೇಕ ನಾಲೆಯನ್ನೂ ನಿರ್ಮಿಸಲಾಗಿದೆ. ದಕ್ಷಿಣದ ಅಂಚಿನಲ್ಲಿ ಚರಂಡಿ ನೀರು ಕೆರೆಯನ್ನು ನೇರವಾಗಿ ಸೇರದಂತೆ ಒಡ್ಡು ನಿರ್ಮಿಸಲಾಗಿದೆ. ಆದರೂ ಶೌಚಯುಕ್ತ ನೀರು ‘ದೇವರ ಕೆರೆ’ಯನ್ನು ಅಪವಿತ್ರಗೊಳಿಸುವುದನ್ನು ತಡೆಯಲು ಸಾಧ್ಯವಾಗದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
