ಉದಯವಾಹಿನಿ, ಗುತ್ತಲ : ಇಲ್ಲಿಯ ಹಾವನೂರು ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿದ್ದ ಗಿಡ, ಮರಗಳನ್ನು ಕಡಿದು ನಾಶಪಡಿಸಿದ ಆರೋಪದಡಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಗುತ್ತಲ, ಹರಳಹಳ್ಳಿ ಮತ್ತು ಹಾವನೂರ ಗ್ರಾಮಗಳಲ್ಲಿ ಅರಣ್ಯ ನಾಶ ಮಾಡಿರುವ ಕುರಿತು ಮಾರ್ಚ್ 14ರ ‘ಪ್ರಜಾವಾಣಿ’ ಸಂಚಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ಹಾವೇರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಅಹ್ಮದ್ ಅಜೀಜ್ ಅವರು ಅಧಿಕಾರಿಗಳ ಸಮೇತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅರಣ್ಯ ನಾಶಪಡಿಸಿದ ಐವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದರು. ಅದರಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ‘ಜೆಸಿಬಿ ಬಳಸಿ ಗಿಡಗಳನ್ನು ಕಡಿದು ನೆಲವನ್ನು ಸಮ ಮಾಡಿರುವುದು
ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದ್ದು, ತಪ್ಪಿತಸ್ವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಪಹಣಿಯ 9ನೇ ಕಾಲಂನಲ್ಲಿ ಅರಣ್ಯ ಹೆಸರಿದೆ. ಸಸಿ ನೆಡಲು ಈ ಜಾಗವನ್ನು ಮೀಸಲಿಡಲಾಗಿದೆ. 114 ಎಕರೆ ಪೈಕಿ ಹಲವು ಎಕರೆಗಳು ಒತ್ತುವರಿ ಆಗಿರುವ ಅನುಮಾನವಿದೆ. ಈ ಬಗ್ಗೆ ಸಮಿತಿಯಿಂದ ವಿಚಾರಣೆ ನಡೆಯುತ್ತಿದೆ ಎಂದು ಅಹಮದ್ ಅಜೀಜ್ ತಿಳಿಸಿದರು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಾಥ ಮನೋಹರ ಕರಲೋಕರ್ ಹಾಜರಿದ್ದರು.
