ಉದಯವಾಹಿನಿ, ಕೊಪ್ಪಳ : ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಅಲ್ಲಿನ ಕೈಗಾರಿಕೆಗಳು ಹೊರಬಿಡುತ್ತಿರುವ ದೂಳು ಮತ್ತು ಮಾಲಿನ್ಯಕಾರಕ ಗಾಳಿಯಿಂದ ರೋಸಿಹೋಗಿದ್ದಾರೆ. ಹಲವು ದಿನಗಳಿಂದ ಅವರು ಸಂಘಟಿತರಾಗಿ ಕೈಗಾರಿಕೆಗಳ ವಿರುದ್ಧ ನಡೆಸುತ್ತಿರುವ ಹೋರಾಟವು ಕೊಪ್ಪಳ ತಾಲ್ಲೂಕಿನಲ್ಲಿ ಕೈಗಾರಿಕೆಗಳಿಂದ ಆಗುತ್ತಿರುವ ಮಾಲಿನ್ಯದಿಂದ ಜನರು ಎದುರಿಸುತ್ತಿರುವ ಸಮಸ್ಯೆಗಳ ತೀವ್ರತೆಯನ್ನು ತೆರೆದಿಟ್ಟಿದೆ.
ಕೊಪ್ಪಳ ತಾಲ್ಲೂಕು ಕೇಂದ್ರದ ವ್ಯಾಪ್ತಿಯಲ್ಲೇ ಒಟ್ಟು 202 ಸಣ್ಣ. ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿವೆ. ಅವುಗಳಲ್ಲಿ 40ಕ್ಕೂ ಹೆಚ್ಚು ಕಬ್ಬಿಣ ಮತ್ತು ಉಕ್ಕು ತಯಾರಿಕಾ ಕೈಗಾರಿಕೆಗಳು. ಈ ವ್ಯಾಪ್ತಿಯಲ್ಲಿನ 33 ಕೈಗಾರಿಕೆಗಳು ಮಾಲಿನ್ಯಕ್ಕೆ ಕಾರಣವಾಗುತ್ತಿವೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ವರದಿ ನೀಡಿದೆ.
ಅವುಗಳಲ್ಲಿ 22 ಕೈಗಾರಿಕೆಗಳಿಂದ ಭಾರಿ ಪ್ರಮಾಣದ ಮಾಲಿನ್ಯವಾಗುತ್ತಿದೆ ಎಂಬುದು ವರದಿಯಲ್ಲಿದೆ.
ಕೈಗಾರಿಕೆಗಳಿಂದ ಆಗುತ್ತಿರುವ ಈ ಮಾಲಿನ್ಯವು ಅಲ್ಲಿನ ಜನರ ಆರೋಗ್ಯ, ಜೀವನೋಪಾಯ ಮತ್ತು ಪರಿಸರದ ಮೇಲೆ ತೀವುವಾದ ದುಷ್ಪರಿಣಾಮಗಳನ್ನು ಉಂಟುಮಾಡುತ್ತಿದೆ. ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಬರೀ ಒಂದು ಕಿ.ಮೀ. ದೂರದಲ್ಲಿ ಒಂದು ಸಾವಿರ ಎಕರೆ ಜಮೀನನ್ನು ಬಳಸಿಕೊಂಡು ಉಕ್ಕು ಮತ್ತು ವಿದ್ಯುತ್ ಉತ್ಪಾದನಾ ಕಾರ್ಖಾನೆಯನ್ನು ವಿಸ್ತರಿಸಲು ಬಟಾ ಸಮೂಹವು ಮುಂದಾಗಿದೆ. ಜನರ ವಿರೋಧಕ್ಕೆ ಮಣಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೈಗಾರಿಕೆ ವಿಸ್ತರಣಾ ಕಾಮಗಾರಿಗೆ ತಾತ್ಕಾಲಿಕ ತಡೆ ವಿಧಿಸಿದ್ದಾರೆ. ಇದರಿಂದ ಜನರಿಗೆ ತಾತ್ಕಾಲಿಕ ಪರಿಹಾರವಷ್ಟೇ ಸಿಕ್ಕಿದೆ.
