ಉದಯವಾಹಿನಿ, ಬೇಲೂರು: ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಹಳ್ಳಿಗದ್ದೆ ಗ್ರಾಮದ ಶಾಂತಿ ಎಸ್ಟೇಟ್‌ನಲ್ಲಿ ಭಾನುವಾರ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಒಂದು ಪುಂಡಾನೆಯನ್ನು ಸೆರೆ ಹಿಡಿಯಲಾಯಿತು. ಕ್ಯಾಪ್ಟನ್ ಪ್ರಶಾಂತ್ ನೇತೃತ್ವದಲ್ಲಿ ಸಾಕಾನೆಗಳಾದ ಭೀಮ, ಕಂಜನ್, ಹರ್ಷ, ಧನಂಜಯ, ಮಹೇಂದ್ರ, ಏಕಲವ್ಯ ಸಹಕಾರದಿಂದ ತೀವ್ರ ಉಪಟಳ ನೀಡುತ್ತಿದ್ದ ಕಾಡಾನೆ ಸೆರೆ ಸಿಕ್ಕಿದೆ. ಅರಣ್ಯ ಇಲಾಖೆ ಹಾಗೂ ಇಟಿಎಫ್ ತಂಡವು ಪುಂಡಾನೆ ಗುರುತಿಸಿದ್ದು, ವೈದ್ಯರು ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದರು.
ಚುಚ್ಚುಮದ್ದು ನೀಡುತ್ತಿದ್ದಂತೆಯೇ ಇನ್ನೊಂದು ಆನೆಯ ಜೊತೆಗೆ ಇದ್ದ
ಒಂಟಿಸಲಗ ಓಡಲು ಆರಂಭಿಸಿತು. ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲೆಂದರಲ್ಲಿ ಓಡಾಡಿ, ಭಾರಿ ಆತಂಕ ಮೂಡಿಸಿತ್ತು. ನಂತರ
ಹರಸಾಹಸಪಟ್ಟು ಅರಣ್ಯ ಇಲಾಖೆ ಸಿಬ್ಬಂದಿ ಎರಡೂ ಆನೆಗಳನ್ನು ಬೇರ್ಪಡಿಸಿದರು. ಒಂಟಿಸಲಗ ಕುಸಿದು ಬಿದ್ದಾಗ, ಸಾಕಾನೆಗಳನ್ನು ಬಳಸಿ. ಸೆರೆ ಹಿಡಿದರು. ಸಿಸಿಎಫ್ ಏಡುಕೊಂಡಲ ಮಾತನಾಡಿ, ಬೆಳಿಗ್ಗೆ 8 ಗಂಟೆಯಿಂದ ಕಾರ್ಯಾಚರಣೆ ನಡೆಸಿದ್ದು, ಅಂದಾಜು 18 ವರ್ಷ ವಯಸ್ಸಿನ ಆನೆಯನ್ನು ಸೆರೆಹಿಡಿಯಲಾಗಿದೆ. ಈ ಆನೆಯು ಈ ಭಾಗದಲ್ಲಿ ಬೆಳೆ ಹಾನಿ ಮಾಡುವುದರ ಜೊತೆಗೆ ಜನರಿಗೆ ತೀವ್ರ ಉಪಟಳ ನೀಡುತ್ತಿತ್ತು. ಕಾರ್ಯಾಚರಣೆಗೆ ಪೊಲೀಸ್ ಹಾಗೂ ಅರಣ್ಯ ಇಲಾಖೆಯ 200 ಸಿಬ್ಬಂದಿ ಬಳಸಲಾಗಿದೆ. ಉಳಿದ 2 ಪುಂಡಾನೆಗಳನ್ನು ಸೆರೆ ಹಿಡಿಯಲಾಗುವುದು. ಮುಂದಿನ ದಿನಗಳಲ್ಲಿ ಉಳಿದ ಆನೆಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
