ಉದಯವಾಹಿನಿ, ತರೀಕೆರೆ: ಕಾಡಾನೆಗಳ ದಾಳಿಯಿಂದ ಅಡಿಕೆ, ತೆಂಗು, ಬಾಳೆ, ಇನ್ನಿತರ ತೋಟದ ಬೆಳೆಗಳನ್ನು ಕಳೆದುಕೊಳ್ಳುತ್ತಿರುವ ಲಿಂಗದಹಳ್ಳಿ ಹೋಬಳಿಯ ರೈತರಿಗೆ ಈಗ ಕಾಡುಹಂದಿಗಳ ಕಾಟವೂ ಶುರುವಾಗಿದೆ. ನಂದಿಬಟ್ಟಲು ಮತ್ತು ತಿಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಬೆಳೆಗಳನ್ನು ರಾತ್ರಿಯ ವೇಳೆ ಕಾಡು ಹಂದಿಗಳು ಮುರಿದು ತಿಂದು ಹಾಕುತ್ತಿವೆ. ಇದರಿಂದ ಮೂರು ವರ್ಷ ಒಳಗಿನ ಅಡಿಕೆ ಮತ್ತು ತೆಂಗಿನಮರಗಳು. ನೆಲಕ್ಕುರುಳುತ್ತಿದ್ದು, ಕಷ್ಟಪಟ್ಟು ಬೆಳೆದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ ಎಂದು ತಿಗಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅಮುದ ತಿಳಿಸಿದರು.
ಕಲ್ಲತ್ತಿಪುರದ ರೈತ ಸೆಲ್ವರಾಜ್ ಅವರು ಇದೇ ಗ್ರಾಮದ ಸರ್ವೆ ನಂಬರ್ 46 ರಲ್ಲಿರುವ 3 ಎಕರೆ ಜಮೀನಿನಲ್ಲಿ ಕಳೆದ 5 ವರ್ಷಗಳ ಹಿಂದೆ ಅಡಿಕೆ ಸಸಿಗಳನ್ನು ನೆಟ್ಟಿದ್ದರು. ಸಮೃದ್ಧವಾಗಿ ಬೆಳೆದಿದ್ದ ಅಡಿಕೆ ತೋಟಕ್ಕೆ ರಾತ್ರಿ ಸಮಯದಲ್ಲಿ ಕಾಡು ಹಂದಿಗಳ ಗುಂಪು ದಾಳಿ ಮಾಡಿ ಸುಮಾರು 70 ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಮುರಿದು ಹಾಕಿದೆ.
ಇದುವರೆಗೂ ರಾಗಿ, ಭತ್ತ, ಜೋಳ, ಶೇಂಗಾ ಮುಂತಾದ ಮಳೆಯಾಶ್ರಿತ ಬೆಳೆಗಳನಷ್ಟೆ ತಿಂದು ಹಾಕುತ್ತಿದ್ದ ಕಾಡು ಹಂದಿಗಳು ಇತ್ತೀಚಿನ ಕೆಲ ದಿನಗಳಿಂದ ಅಡಿಕೆ, ತೆಂಗು, ಬಾಳೆ ಮುಂತಾದ ತೋಟದ ಬೆಳೆಗಳನ್ನು ಹಾಳುಮಾಡಿತ್ತವೆ. ಬ್ಯಾಂಕ್ ಇನ್ನಿತರೆ ಕಡೆಗಳಿಂದ ಸಾಲ ಮಾಡಿ ಬೆಳ ಮಾಡಿರುವ ನಮ್ಮಂತಹ ರೈತರಿಗೆ ವ್ಯವಸಾಯವೇ ತ್ರಾಸದಾಯಕ ಎಂಬಂತಾಗಿದೆ ಎಂದು ನೊಂದ ರೈತ ಸೆಲ್ವರಾಜ್ ಹೇಳಿದರು.
