ಉದಯವಾಹಿನಿ, ಬೆಂಗಳೂರು: ರಾಜ್ಯ ಸರ್ಕಾರ ಮಾರ್ಚ್ ೨೧ ರಂದು ನಗರದ ಸ್ಯಾಂಕಿ ಟ್ಯಾಂಕ್‌ನ ಬಫರ್ ಝೋನ್‌ನಲ್ಲಿ ಆಯೋಜಿಸಿದ್ದ ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ವಕೀಲ ಜಿ.ಆರ್. ಮೋಹನ್ ನಗರದ ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ೨೦೧೯ರಲ್ಲಿ ಸಲ್ಲಿಸಿರುವ ಗೀತಾ ಮಿಶ್ರಾ ಅವರ ಅರ್ಜಿಯ ಜತೆಗೆ ಈ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ವಿಷಯ ಪ್ರಸ್ತಾಪಿಸಿದ್ದಾರೆ.
ಜತೆಗೆ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಕಾವೇರಿ ಆರತಿಗೆ ಸಿದ್ಧತೆ ನಡೆಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅರ್ಜಿದಾರರ ಪರ ವಕೀಲರು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂಐ ಅರುಣ್ ನೇತೃತ್ವದ ಪೀಠಕ್ಕೆ ಈ ವಿಷಯವನ್ನು ಶೀಘ್ರ ವಿಚಾರಣೆಗೆ ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ವಿಚಾರಣೆ ವೇಳೆ ವಕೀಲರು,ಗಂಗಾರತಿ ಶೈಲಿಯಲ್ಲಿ ಕಾವೇರಿ ಆರತಿ ಮಾಡಲು ಅರ್ಜಿದಾರರ ಅಭ್ಯಂತರವಿಲ್ಲ ಎಂದಿದ್ದಾರೆ ಆದರೆ, ಕಾರ್ಯಕ್ರಮಕ್ಕಾಗಿ ಕೆರೆಯ ಬಫರ್ ಜೋನ್‌ನಲ್ಲಿ ಅಕ್ರಮವಾಗಿ ತಾತ್ಕಾಲಿಕ ವೇದಿಕೆ ನಿರ್ಮಿಸಲಾಗುತ್ತಿದ್ದು, ಇದಕ್ಕೆ ನಮ್ಮ ಆಕ್ಷೇಪವಿದೆ, ಎಂದು ಪೀಠಕ್ಕೆ ತಿಳಿಸಿದ್ದಾರೆ. ಸ್ಯಾಂಕಿ ಕೆರೆಯ ಬಫರ್ ಝೋನ್‌ನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಗೆ ವಿರುದ್ಧವಾಗಿದೆ. ಈ ರೀತಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದರೆ ಕೆರೆಯಲ್ಲಿರುವ ಪಕ್ಷಿಗಳಿಗೆ ಹೆಚ್ಚಿನ ಹಾನಿಯಾಗಲಿದೆ ಎಂದು ಪೀಠಕ್ಕೆ ವಿವರಣೆ ನೀಡಿದ್ದಾರೆ.
