ಉದಯವಾಹಿನಿ, ಆನೇಕಲ್ : ಸುಪ್ರೀಂಕೋರ್ಟ್ ಆದೇಶವಿದ್ದರೂ ಸಿಎಂ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆನೇಕಲ್ ತಾಲ್ಲೂಕು ಮಾದಿಗ ಸಮಾಜದ ಮುಖಂಡ ಎ.ಉದಯ್ ಕುಮಾರ್ ಆರೋಪ ವ್ಯಕ್ತ ಪಡಿಸಿದರು.
ಅವರು ಸರ್ಜಾಪುರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವುದಾಗಿ ತಿಳಿಸಿದ್ದರು. ಆದರೆ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಜಾರಿಗೆ ಮುಂದಾಗುತ್ತಿಲ್ಲ. ಕಳೆದ ಚಳಿಗಾಲದ ಆಧಿವೇಶನದಲ್ಲಿ ಬೆಳಗಾವಿಯಲ್ಲಿ ನಡೆದ ಸಮಾವೇಶದಲ್ಲಿ ಸಚಿವ ಮಹದೇವಪ್ಪ ರವರು ಮೂರೇ ತಿಂಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ಅಶ್ವಾಸನೆ ನೀಡಿದರು ಅದು ಹುಸಿಯಾಗಿದೆ ಎಂದರು.
ರಾಜ್ಯ ಸರ್ಕಾರ ಈ ಕೂಡಲೇ ಒಳ ಮೀಸಲಾತಿ ವರ್ಗಿಕರಣವನ್ನು ಜಾರಿ ಮಾಡಬೇಕೆಂದು ಆಗ್ರಹಿಸಿ ಮಾದಿಗ ಸಮುದಾಯದ ಹೋರಾಟಗಾರರು ಪ್ರೊ-ಬಿ.ಕೃಷ್ಣಪ್ಪ ರವರ ಚೈತ್ಯ ಭೂಮಿಯಿಂದ ಬೆಂಗಳೂರಿನ ವರೆಗೂ ಪಾದಯಾತ್ರೆ ಹಮ್ಮಿಕೊಂಡಿದ್ದು ಅದರಂತೆ ದಿನಾಂಕ ೨೧.೦೩.೨೦೨೫ ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಕ್ರಾಂತಿಕಾರಿ ಮಹಾ ಸಮಾವೇಶಕ್ಕೆ ಕರ್ನಾಟಕ ರಾಜ್ಯದಲ್ಲಿರುವ ಪ್ರಜ್ಞಾವಂತ ಬುದ್ಧಿಜೀವಿಗಳು, ಸಾಹಿತಿಗಳು, ಚಿಂತಕರು, ಹಾಗೂ ಹೋರಾಟಗಾರರು ಮತ್ತು ಮಾದಿಗ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸಮಾವೇಶವನ್ನು ಯಶಸ್ವಿ ಮಾಡಬೇಕೆಂದು ಕೋರಿದರು.
ಅತ್ತಿಬೆಲೆ ಪುರಸಭೆ ಮಾಜಿ ಸದಸ್ಯ ಪಿ.ನಾರಾಯಣಸ್ವಾಮಿ ಮಾತನಾಡಿ, ಸಚಿವ ಕೆ.ಎಚ್ ಮುನಿಯಪ್ಪ ಮತ್ತು ಆರ್.ಬಿ ತಿಮ್ಮಾಪುರ ರವರು ಆಳುವ ಸರ್ಕಾರದ ಗುಲಾಮರಾಗಿ ಇದ್ದಾರೆ. ಮಾದಿಗ ಸಮುದಾಯವನ್ನು ಪ್ರತಿನಿಧಿಸುವಲ್ಲಿ ಅವರು ಯೋಗ್ಯವಾಗಿಲ್ಲ ಬದಲಾಗಿ ತಮ್ಮ ಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ಸರ್ಕಾರದ ಪರವಾಗಿ ವಕಾಲತ್ತನ್ನು ವಹಿಸಿದ್ದಾರೆ. ಅತ್ಯಂತ ನ್ಯಾಯಪರವಾದ ಬೇಡಿಕೆಯಾದ ಒಳಮಿಸಲಾತಿಯು ಕುರಿತು ನೆನ್ನೆ ಪತ್ರಿಕಾಗೋಷ್ಠಿಯನ್ನು ನಡೆಸಿ ಒಳ ಮೀಸಲಾತಿ ಜಾರಿ ಮಾಡಲು ಇನ್ನೂ ಕಾಲಾವಕಾಶವನ್ನು ಕೋರುತ್ತಿದ್ದಾರೆ ಮತ್ತು ಹೋರಾಟಗಾರರ ದಿಕ್ಕು ತಪ್ಪಿಸುವಂತಹ ಹೇಳಿಕೆಗಳನ್ನು ನೀಡುತ್ತಿರುವುದು ದೃತಿಗೆಡುವಂಥ ಸಂಗತಿಯಾಗಿದೆ ಕೇವಲ ಅವರ ಅಸ್ತಿತ್ವ ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ಅವರ ಪ್ರಯತ್ನ ನಿರತವಾಗಿದೆ. ಹಾಗಾಗಿ ಸಚಿವ ಕೆ.ಎಚ್ ಮುನಿಯಪ್ಪರವರು ಈ ಕೂಡಲೇ ರಾಜೀನಾಮೆ ನೀಡಿ ಹೋರಾಟಗಾರರ ಜೊತೆ ನಿಲ್ಲಬೇಕು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!