ಉದಯವಾಹಿನಿ, ಚಳ್ಳಕೆರೆ: ಹಿಂಗಾರು ಹಂಗಾಮಿನಲ್ಲಿ ತಡವಾಗಿ ಬಿತ್ತನೆ ಮಾಡಿದ್ದ ಈರುಳ್ಳಿ ತಾಲ್ಲೂಕಿನಲ್ಲಿ ಕಟಾವಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತವಾಗಿರುವ ಕಾರಣ ರೈತರು ಕಂಗಾಲಾಗಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ 40ರವರೆಗೂ ಮಾರಾಟವಾಗುತ್ತಿದೆ. ಆದರೆ ರೈತರಿಂದ ಖರೀದಿಸುವ ಸಗಟು ಈರುಳ್ಳಿ 100 ಕೆ.ಜಿ ಬ್ಯಾಗ್ ಕೇವಲ *300- ₹500ಕ್ಕೆ ಮಾರಾಟವಾಗುತ್ತಿದೆ. ಹೆಚ್ಚು ಈರುಳ್ಳಿ ಮಾರುಕಟ್ಟೆಗೆ ಬರುತ್ತಿರುವ ಕಾರಣ ಬೆಲೆ ಕುಸಿತ ಉಂಟಾಗಿದ್ದು ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ತಾಲ್ಲೂಕಿನ ಬಾಲೇನಹಳ್ಳಿ, ಕುರುಡಿಹಳ್ಳಿ ರಾಮಜೋಗಿಹಳ್ಳಿ, ಸೋಮಗುದ್ದು, ದೇವರಮರಿಕುಂಟೆ, ನಾರಾಯಣಪುರ, ದೊಡ್ಡ ಉಳ್ಳಾರ್ತಿ, ನೇರಲಗುಂಟೆ, ನಾಯಕನಹಟ್ಟಿ, ಗಂಜಿಗುಟೆ, ದುರ್ಗಾವರ ಮುಂತಾದ ಗ್ರಾಮದದಲ್ಲಿ ಈರುಳ್ಳಿ ಕಟಾವು ಮಾಡುತ್ತಿದ್ದು ಬೆಲೆ ಕುಸಿತದಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಬೆಳೆ ಕಟಾವು ಮಾಡಿರುವ ಬೆಳೆಗಾರರು, ಅಧಿಕ ಬೆಲೆ ನಿರೀಕ್ಷಿಸಿ ಈರುಳ್ಳಿ ಸ್ವಚ್ಛಗೊಳಿಸಿ ಚೀಲಕ್ಕೆ ತುಂಬಿ ಸಂಗ್ರಹಿಸಿಟ್ಟುಕೊಂಡು ಮಾರಾಟಕ್ಕೆ ಕಾಯುತ್ತಿದ್ದಾರೆ. ಆದರೆ ಬೆಲೆಯೇ ಇಲ್ಲದ ಕಾರಣ ಮಾರಾಟ ಮಾಡಲು ಕಷ್ಟಪಡುವಂತಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಅದರ ಲಾಭ ರೈತರಿಗೆ ಸಿಗದಂತಾಗಿದೆ.
ಈರುಳ್ಳಿ ಗಾತ್ರ ಮತ್ತು ಬಣ್ಣ ಬಹಳ ಉತ್ಕೃಷ್ಟವಾಗಿದೆ. ಮಹಾರಾಷ್ಟ್ರದ ಸಾಸಿಕ್‌ನಿಂದ ಗಡ್ಡೆ ತಂದು ಬಿತ್ತನೆ ಮಾಡಿದ್ದಾರೆ. ನಾಸಿಕ್ ಗಡ್ಡೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವ ಕಾರಣ ಸ್ಥಳೀಯ ರೈತರು ಅದೇ ಬಿತ್ತನೆ ಬೀಜ ತಂದು ನಾಟಿ ಮಾಡಿ ಬೆಳೆ ತೆಗೆದಿದ್ದಾರೆ. ಆದರೆ ಬೆಲೆ ಕುಸಿತದ ಕಾರಣದಿಂದ ನಷ್ಟ ಅನುಭವಿಸುತ್ತಿದ್ದಾರೆ.
