ಉದಯವಾಹಿನಿ, ಕಾರಟಗಿ: ತುಂಗಭದ್ರಾ ಎಡದಂಡೆ ಮುಖ್ಯನಾಲೆಗೆ ಏ.20ರವರೆಗೆ ನೀರು ಹರಿಸಿ, ರೈತರ ಬೆಳೆ ಉಳಿಸಿ ರೈತರ ಹಿತರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿ ಬುಧವಾರ ರೈತರು ಪ್ರತಿಭಟನೆ ನಡೆಸಿದರು. ಕರ್ನಾಟಕ ನೀರಾವರಿ ನಿಗಮದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದ ರೈತರು ಪಟ್ಟಣದ ಕನಕದಾಸ ವೃತ್ತದಲ್ಲಿ ಸಮಾವೇಶಗೊಂಡರು.
31ನೇ ವಿತರಣಾ ಕಾಲುವೆ ವ್ಯಾಪ್ತಿಯ ನೀರು ಬಳಕೆದಾರರ ಸಂಘಗಳ ಪ್ರಮುಖರು ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು
ತುಂಗಭದ್ರಾ ಎಡದಂಡೆ ಕಾಲುವೆಗೆ ಏ.20ರವರೆಗೆ ನೀರು ಹರಿಸಲೇಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವ ಮನವಿಯನ್ನು ತಹಶೀಲ್ದಾರ್ ಎಂ. ಕುಮಾರಸ್ವಾಮಿಗೆ ಸಲ್ಲಿಸಿದರು.
ನೀರು ಬಳಕೆದಾರರ ಸಂಘದ ಪ್ರಮುಖರು, ವಿವಿಧ ರೈತ ಸಂಘಟನೆಗಳ ಮುಖಂಡರುಗಳು ಮಾತನಾಡಿ, ಏಪ್ರಿಲ್ 20ರವರೆಗೆ ನೀರು ಹರಿಸಿ, ಕೊನೆ ಭಾಗದ ರೈತರನ್ನು ಉಳಿಸಬೇಕು. ಅಸಮರ್ಪಕ ನೀರು ನಿರ್ವಹಣೆಯಿಂದ ಕಾರಟಗಿ, ಸಿಂಧನೂರು ತಾಲ್ಲೂಕಿನ ಕೆಳ ಭಾಗದ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಭತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿದ್ದು, ಕನಿಷ್ಟ ಎ.20ರವರೆಗೆ ನೀರು ಹರಿಸದಿದ್ದರೆ, ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗಿದೆ ಎಂದರು.
