ಉದಯವಾಹಿನಿ, ಅಷ್ಟೂರು : ಬೀದರ್ ತಾಲ್ಲೂಕಿನ ಅಷ್ಟೂರು ಗ್ರಾಮದಲ್ಲಿ ಮಾರ್ಚ್ 21ರಿಂದ ಹಿಂದೂ-ಮುಸ್ಲಿಂ ಭಾವೈಕ್ಯದ ಜಾತ್ರೆ ಆರಂಭವಾಗಲಿದ್ದು, ಜಾತ್ರೆ ನಿಮಿತ್ತ ಗ್ರಾಮದ ಬಹಮನಿ ಅರಸರ ಗುಮ್ಮಟಗಳ ಪರಿಸರದಲ್ಲಿ ಸಕಲ ಸಿದ್ಧತೆ ನಡೆದಿದೆ. ಜನರ ಮನೋರಂಜನೆಗಾಗಿ ಜಾತ್ರೆಗೆ ಈಗಾಗಲೇ ವಿವಿಧೆಡೆಯಿಂದ ರೈಲು,
ಜೋಕಾಲಿ, ಬ್ರೇಕ್ ಡ್ಯಾನ್ಸ್ ಮೊದಲಾದ ಯಂತ್ರಗಳು ಬಂದಿವೆ. ಕಾಯಿ, ಕರ್ಪೂರ, ಬೆಂಡು, ಬತಾಸು, ತಿಂಡಿ ತಿನಿಸು, ಮಕ್ಕಳ ಆಟಿಕೆಯ ತಾತ್ಕಾಲಿಕ ಮಳಿಗೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿವೆ.
ಸುಲ್ತಾನ್ ಅಹಮ್ಮದ್ ಶಾ ವಲಿ ಬಹಮನಿ ಅವರ ಜನ್ಮದಿನದ ಪ್ರಯುಕ್ತ ಆಚರಿಸಲಾಗುವ ಜಾತ್ರೆಗೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡಿಯಾಳದ ಜಂಗಮರ ಪ್ರವೇಶದೊಂದಿಗೆ ಶುಕ್ರವಾರ (ಮಾ.21)
ಚಾಲನೆ ಸಿಗಲಿದೆ. 24ರಂದು ಸಂಜೆ 6ಕ್ಕೆ ದೀಪೋತ್ಸವ, 25ರಂದು ಸಿಡಿಮದ್ದು ಪ್ರದರ್ಶನ, 26 ರಂದು ಜಂಗಿ ಕುಸ್ತಿ ಸ್ಪರ್ಧೆಗಳು ನಡೆಯಲಿವೆ. ಜಾತ್ರೆಯ ಜಂಗಿ ಕುಸ್ತಿ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿದ್ದು, ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಟ್ಟಿಗಳ ಕುಸ್ತಿ ವೀಕ್ಷಣೆಗೆ ಅಪಾರ ಸಂಖ್ಯೆಯ ಜನ ಸೇರುತ್ತಾರೆ.
ಕಲಾಂ ಓದುವುದು, ಶಂಖ ಊದುವುದು, ಸಮಾಧಿಗೆ ಪುಷ್ಪವೃಷ್ಟಿ.
ಗುಮ್ಮಟದ ನಾಲ್ಕೂ ದಿಕ್ಕುಗಳಲ್ಲಿ ಪೂಜೆ ಸಲ್ಲಿಕೆ ಭಕ್ತಿ, ಶ್ರದ್ಧೆಯಿಂದ ನೆರವೇರಲಿವೆ ಎಂದು ತಿಳಿಸುತ್ತಾರೆ ಗ್ರಾಮದ ಸುಲ್ತಾನ್ ಖಲೀಲ್ ಶಾ ಬಹಮನಿ, ಸುಲ್ತಾನ್ ಅಹಮ್ಮದ್ ಶಾವಲಿ ಬಹಮನಿ ಅವರನ್ನು ಮುಸ್ಲಿಮರು ‘ವಲಿ’ ಹಾಗೂ ಹಿಂದುಗಳು ‘ಅಲ್ಲಮಪ್ರಭು’ ಎಂದು ಪೂಜಿಸುತ್ತಾರೆ.
