ಉದಯವಾಹಿನಿ, ಮುತ್ತಿನಕೊಪ್ಪ (ನರಸಿಂಹರಾಪುರ): ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಕುಸುಬೂರು ಗ್ರಾಮದ ದೊಡ್ಡಿನತಲೆ ಬಳಿ ಇಬ್ಬರು ಶಾಲಾ ಮಕ್ಕಳನ್ನು ಕಾಡಾನೆಗಳು ಬುಧವಾರ ಸಂಜೆ ಬೆನ್ನಟ್ಟಿವೆ. ದೊಡ್ಡಿನತಲೆಯ ದಿನೇಶ್ ಎಂಬುವರ ಇಬ್ಬರು ಮಕ್ಕಳು ಪ್ರತಿ ದಿನವೂ ಮುತ್ತಿನಕೊಪ್ಪ ಖಾಸಗಿ ಶಾಲೆಗೆ ಹೋಗಿ ಸಂಜೆ ಆಟೊದಲ್ಲಿ ಮನೆಗೆ
ಬರುತ್ತಿದ್ದರು.
ಮನೆಯ ಸಮೀಪ ರಸ್ತೆ ಹಾಳಾಗಿರುವುದರಿಂದ ಆಟೋದವರು ಮಕ್ಕಳನ್ನು ಪ್ರತಿದಿನ ಸ್ವಲ್ಪ ದೂರದಲ್ಲೇ ಇಳಿಸಿ ಹೋಗುತ್ತಿದ್ದರು.
ಮಕ್ಕಳು ಅಲ್ಲಿಂದ ಮನೆಯವರೆಗೆ ನಡೆದುಕೊಂಡು ಬರುತ್ತಿದ್ದರು.
ಬುಧವಾರ ಸಂಜೆಯೂ ಆಟೊದಿಂದ ಇಳಿದು ಮಕ್ಕಳು ನಡೆದುಕೊಂಡು ಬರುತ್ತಿದ್ದಾಗ ಏಕಾಏಕಿ 2 ಕಾಡಾನೆಗಳು ರಸ್ತೆಯಲ್ಲಿ ಎದುರಾಗಿವೆ. ಈ ಪೈಕಿ ಒಂದು ಕಾಡಾನೆಯು ಮಕ್ಕಳನ್ನು ಬೆನ್ನಟ್ಟಿಕೊಂಡು ಬಂದಿದೆ. ಆ ಸಂದರ್ಭದಲ್ಲಿ ಅಲ್ವೇ ಬರುತ್ತಿದ್ದ ಗ್ರಾಮಸ್ಮರಾದ ಸಮಯತ್ ಎಂಬುವರು ಮಕ್ಕಳನ್ನು ಕರೆದುಕೊಂಡು ಸಮೀಪದಲ್ಲೇ ರಸ್ತೆಯ ಬದಿ ನಿರ್ಮಾಣವಾಗುತ್ತಿರುವ ಹೊಸ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಅರಣ್ಯ ಇಲಾಖೆಗೆ ದೂರು ನೀಡಲಾಯಿತು.
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆನೆ ಕಾರ್ಯಪಡೆ ತಂಡದವರು ಕಾರ್ಯಾಚರಣೆ ನಡೆಸಿದರು.
