ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ೩ ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಪುಲಿಕೇಶಿನಗರ ಪೊಲೀಸ್‌ಠಾಣಾ ವ್ಯಾಪ್ತಿಯ ಜೀವನಹಳ್ಳಿಯಲ್ಲಿ ನಡೆದಿದೆ. ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ರಕ್ಷಾ ಎಂಬ ಮೂರು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ತನ್ನ ತಂದೆಯ ಜತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಭಾರಿ ಮಳೆಗೆ ರಸ್ತೆ ಬದಿಯ ಮರ ಬಿದ್ದಿದೆ.
ಬೈಕ್‌ನ ಮುಂಭಾಗದಲ್ಲಿ ಕುಳಿತ್ತಿದ್ದ ರಕ್ಷಾ ತಲೆಯ ಮೇಲೆ ಮರದ ತುಂಡು ಬಿದ್ದು ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಕಮ್ಮನಹಳ್ಳಿ ಬಲಿಯ ಕುಳ್ಳಪ್ಪ ಸರ್ಕಲ್ ನಿವಾಸಿಗಳಾದ ಶಕ್ತಿ ಮತ್ತು ಸತ್ಯ ದಂಪತಿಯ ಮೂರು ವರ್ಷದ ಮಗು ಪ್ರಾಣ ಕಳೆದುಕೊಂಡಿದ್ದಾಳೆ.
ತಂದೆ ಜತೆ ಮಾವ ಮುರಳಿ ಮನೆಗೆ ಬೈಕ್‌ನಲ್ಲಿ ಬಂದಿದ್ದ ಮಗು ವಾಪಸ್ ತೆರಳುವ ವೇಳೆ ಇ ಅವಘಡ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡ ಮಗುವನ್ನು ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮಗುವನ್ನು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಪೂರ್ವ ವಲಯದ ಬಿಬಿಎಂಪಿ ಜಂಟಿ ಆಯುಕ್ತೆ ಸರೋಜಾದೇವಿ, ಬಿಬಿಎಂಪಿ ಅರಣ್ಯಘಟಕದ ಮುಖ್ಯಸ್ಥರಾದ ಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು. ಪುಲಿಕೇಶಿನಗರದಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಮಗು ತಂದೆಗೂ ಬೆನ್ನು ಮೂಳೆ ಮುರಿದಿದೆ ಎಂದು ಹೇಳಲಾಗಿದೆ.
