ಉದಯವಾಹಿನಿ, ಚನ್ನಗಿರಿ: ‘ಈ ಸಾಲಿನ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚು ಅನುದಾನ ಮೀಸಲಿಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಭಯವನ್ನು ದೂರವಿಟ್ಟು ಪರೀಕ್ಷೆ ಬರೆಯಬೇಕು.
ಮುಂಬರುವ ದಿನಗಳಲ್ಲಿ ಶಾಲಾ ಕೊಠಡಿ ಹಾಗೂ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು, ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ 13,500 ಶಿಕ್ಷಕರ ನೇಮಕಾತಿ ಮಾಡಲಾಗುವುದು. ಹಾಗೆಯೇ ಎನ್‌ಪಿಎಸ್ ಯೋಜನೆಯನ್ನು ರದ್ದುಗೊಳಿಸಿ. ಹಿಂದೆ ಇದ್ದ ಒಪಿಎಸ್ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದರು.
‘ಯಾವುದೇ ಶಾಲೆಗಳಲ್ಲಿ ಮಕ್ಕಳನ್ನು ಕಸಗುಡಿಸುವ ಕಾರ್ಯಕ್ಕೆ ತೊಡಗಿಸಿದರೆ ಅಂತಹ ಶಾಲೆಯ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು. ಎಲ್ಲ ಸರ್ಕಾರಿ ಶಾಲೆಗಳಲ್ಲೂ ಫೇಸ್ ಹಾಜರಾತಿ ಕ್ರಮವನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುವುದು. ಶಿಕ್ಷಕರುಗುಣಮಟ್ಟದ ಶಿಕ್ಷಣವನ್ನು ನೀಡುವ ಕಡೆಗೆ ಗಮನಹರಿಸಬೇಕು’ ಎಂದು ಹೇಳಿದರು.
‘ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜು ವಿ. ಶಿವಗಂಗಾ ಅವರು ತಮ್ಮ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲು ನಿರ್ಧರಿಸಿದ್ದು, ಕ್ಷೇತ್ರಕ್ಕೆ ಹೆಚ್ಚು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಅವರ ಮನವಿ ಸ್ಪಂದಿಸಲಾಗುವುದು’ ಎಂದರು
